ADVERTISEMENT

ಐದು ವರ್ಷದೊಳಗಿನ ಮಕ್ಕಳ‌ ಸಾವಿಗೆ ಅತಿಸಾರ ಭೇದಿ ಕಾರಣ

ಜಿಲ್ಲೆಯಾದ್ಯಂತ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:40 IST
Last Updated 18 ಜೂನ್ 2025, 15:40 IST
ಬೀದರ್‌ನ ಬ್ರಿಮ್ಸ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ ಉದ್ಘಾಟಿಸಿದರು
ಬೀದರ್‌ನ ಬ್ರಿಮ್ಸ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ ಉದ್ಘಾಟಿಸಿದರು   

ಬೀದರ್‌: ‘ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಅತಿಸಾರ ಭೇದಿ ಪ್ರಮುಖ ಕಾರಣ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ ತಿಳಿಸಿದರು.

ನಗರದ ಬ್ರಿಮ್ಸ್‌ನ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಕ್ಕಳಿಗೆ ಪದೇ ಪದೇ ಭೇದಿಯಾದರೆ ಅವರ ತೂಕ ಕ್ಷೀಣಿಸಿ ಅಪೌಷ್ಟಿಕತೆ ಉಂಟಾಗುತ್ತದೆ. ಇದರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಸಾವಿನ ಪ್ರಮಾಣ ಹೆಚ್ಚು ಸಂಭವಿಸುತ್ತದೆ. ಆದಕಾರಣ ಪೋಷಕರು ಹೆಚ್ಚು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲೆಯಾದ್ಯಂತ ಜೂ. 31ರ ವರೆಗೆ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗೆ ಒಆರ್‌ಎಸ್‌ ಪೊಟ್ಟಣ ಮತ್ತು ಜಿಂಕ್‌ ಮಾತ್ರೆ ವಿತರಿಸಲಾಗುತ್ತಿದೆ. ಇಷ್ಟೇ ಅಲ್ಲ, ಒಆರ್‌ಎಸ್‌ ದ್ರಾವಣ ತಯಾರಿಸುವ ವಿಧಾನ, ಭೇದಿ ಉಂಟಾದಾಗ ಏನು ಮಾಡಬೇಕೆ ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಗುತ್ತಿದೆ ಎಂದರು.

ಮೊದಲ ಆರು ತಿಂಗಳಲ್ಲಿ ಮಗುವಿಗೆ ಕೇವಲ ತಾಯಿ ಹಾಲು ಮಾತ್ರ ನೀಡಬೇಕು. ಅಡುಗೆ ಮಾಡುವ, ಬಡಿಸುವ ಮುನ್ನ ಮತ್ತು ಮಗುವಿನ ಮಲ ಶುಚಿ ಮಾಡಿದ ನಂತರ ಕೈಗಳನ್ನು ಸೋಪು ಬಳಸಿ ತೊಳೆದುಕೊಳ್ಳಬೇಕು ಎಂದು ಹೇಳಿದರು.

ಬೀದರ್‌ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಹ್ಮದುದ್ದೀನ್ ಮಾತನಾಡಿ, ಅತಿಸಾರ ಭೇದಿಯಾಗುವಾಗ ಮತ್ತು ನಂತರ ತಾಯಿ ಹಾಲು, ದ್ರಾವಣ ಹಾಗೂ ಹೆಚ್ಚುವರಿ ಪೌಷ್ಟಿಕ ಆಹಾರ ನೀಡುವುದನ್ನು ಮುಂದುವರೆಸಬೇಕು ಎಂದು ತಿಳಿಸಿದರು.

ಮಕ್ಕಳ ತಜ್ಞ ಡಾ. ಜಗದೀಶ ಕೋಟೆ ಮಾತನಾಡಿ, ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಲಸಿಕೆ ನೀಡಬೇಕು. ಲಸಿಕೆ ಹಾಕಿಸಿದರೆ ಮಾರಕ ರೋಗಗಳು ಬರದಂತೆ ತಡೆಯಬಹುದು ಎಂದು ಹೇಳಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಶಿವಶಂಕರ ಬಿ., ಮಕ್ಕಳ ತಜ್ಞೆ ಡಾ. ಶಾಂತಲಾ ಕೌಜಲಗಿ, ಬೀದರ್‌ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಜಿಲ್ಲಾ ಕಾರ‍್ಯಕ್ರಮ ವ್ಯವಸ್ಥಾಪಕ ಉಮೇಶ ಬಿರಾದಾರ, ಜಿಲ್ಲಾ ಕಾರ‍್ಯಕ್ರಮ ಸಂಯೋಜಕ ಶಿವಶಂಕರ ಬೇಮಳಗಿ, ಐಎಫ್ಎಂ ಲೋಕೇಶ, ಸಿಎಚ್ಒ ಗಂಗಾಧರ ಕಾಂಬಳೆ, ಡಿಎನ್‌ಒ ಭಾಗ್ಯಲಕ್ಷ್ಮಿ, ಅಶೋಕ, ವಿನಾಯಕ, ದೇವಿದಾಸ, ಚನ್ನಬಸವ, ಸನ್ನಿಪಾಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.