
ಹೈದರಾಬಾದ್–ಮುಂಬೈ ಹೆದ್ದಾರಿ ತಡೆಗೆ ಯತ್ನ: ಸಿಎಂ ಭಾವಚಿತ್ರಕ್ಕೆ ಮಸಿ ಬಳಿದ ರೈತರು
ಹುಮನಾಬಾದ್: ಬೆಳಗಾವಿ ಜಿಲ್ಲೆಯಂತೆ ಪ್ರತಿ ಟನ್ ಕಬ್ಬಿಗೆ ₹3,300 ನಿಗದಿಪಡಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಭಾವಚಿತ್ರಕ್ಕೆ ಮಸಿ ಬಳಿದು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಬೆಲೆ ನಿಗದಿ ಸಂಬಂಧ ಜಿಲ್ಲಾಡಳಿತ–ಕಬ್ಬು ಬೆಳೆಗಾರರ ನಡುವೆ ನಡೆದ ನಾಲ್ಕು ಸಭೆಗಳು ವಿಫಲಗೊಂಡ ಬಳಿಕ ರೈತರು ಬುಧವಾರ ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿಗೆ ಕರೆ ಕೊಟ್ಟಿದ್ದರು. ವಿವಿಧ ಭಾಗಗಳಿಂದ ಎತ್ತಿನ ಬಂಡಿಗಳಲ್ಲಿ ಆಗಮಿಸಿದ್ದ ರೈತರು ಹೆದ್ದಾರಿ ತಡೆಗೆ ಮುಂದಾದರು. ಆದರೆ, ಪೊಲೀಸರು ಅವರನ್ನು ತಡೆದರು. ಈ ನಡುವೆ ವಾಗ್ವಾದ ನಡೆಯಿತು. ಆನಂತರ ರೈತರು ಹುಮನಾಬಾದ್ ಪಟ್ಟಣದಲ್ಲಿ ಧರಣಿ ನಡೆಸಿ, ಪ್ರತಿಭಟನಾ ರ್‍ಯಾಲಿ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಬೀದರ್ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರೈತ ಸಂಘಟನೆಗಳ ಒಕ್ಕೂಟ, ಸಿಪಿಎಮ್, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಕಬ್ಬು ಬೆಳೆಗಾರರನ್ನು ಬೆಂಬಲಿಸಿ ಪಾಲ್ಗೊಂಡಿದ್ದರು. ಧರಣಿ ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮನವಿ ಪತ್ರ ಸ್ವೀಕರಿಸಿ, ಕಾರ್ಖಾನೆಗಳ ಮನವೊಲಿಸಿ ವಿಷಯ ಇತ್ಯರ್ಥಕ್ಕೆ ಶ್ರಮಿಸಲಾಗುವುದು. ಗುರುವಾರ (ನ. 13) ನಡೆಯಲಿರುವ ಸಭೆಯಲ್ಲಿ ಕಬ್ಬು ಬೆಳೆಗಾರರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.