ಚಾಮರಾಜನಗರ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಟಿಕೆಟ್ ಆಕಾಂಕ್ಷಿಗಳು’ ಎಂದು ಬಿಜೆಪಿ ಮುಖಂಡರಾದ ಕೋಟೆ ಎಂ.ಶಿವಣ್ಣ, ಜಿ.ಎನ್.ನಂಜುಂಡಸ್ವಾಮಿ, ಸಿ.ರಮೇಶ್ ಮತ್ತು ಎಸ್.ಮಹದೇವಯ್ಯ ಅವರು ಬುಧವಾರ ಘೋಷಿಸಿದರು.
ಚಾಮರಾಜನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಅವರು, ‘ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಹೇಳಿದರು.
‘ನಾವು ಹಿರಿಯ ನಾಯಕರಾಗಿದ್ದೇವೆ. ಪಕ್ಷದ ಅನೇಕ ಜವಾಬ್ದಾರಿಗಳನ್ನು ಹೊತ್ತು ಪಕ್ಷ ಸಂಘಟನೆಗೆ ದುಡಿದಿದ್ದೇವೆ. ಅನೇಕ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದೇವೆ’ಎಂದು ಬಿಜೆಪಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಹೇಳಿದರು.
‘ಪಕ್ಷದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ಅಲ್ಲದೆ, ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಘಟಕದ ಅಧ್ಯಕ್ಷರು ಕೊಟ್ಟಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ. ಈ ಎಲ್ಲ ಸಂದರ್ಭದಲ್ಲಿಯೂ ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇವೆ’ ಎಂದರು.
‘ಪಕ್ಷದ ಹೈಕಮಾಂಡ್ ಅಭ್ಯರ್ಥಿಯನ್ನು ನಿರ್ಧರಿಸುವ ಮೊದಲೇ, ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುವುದು ಸರಿಯಲ್ಲ. ಇದರಿಂದ ಜನರಲ್ಲಿ ಗೊಂದಲ ಮೂಡಿಸಿದಂತೆ ಆಗುತ್ತದೆ’ ಎಂದು ಶಿವಣ್ಣ ಅವರು ಟಿಕೆಟ್‌ನ ಪ್ರಬಲ ಆಕಾಂಕ್ಷಿ ಕೆ.ಶಿವರಾಮ್ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಹೇಳಿದರು.
ಬಿಜೆಪಿ ಪರ ಒಲವು
ಕಾಂಗ್ರೆಸ್, ಜೆಡಿಸ್ ಸಮ್ಮಿಶ್ರಸರ್ಕಾರದಲ್ಲಿಯೇ ಭಿನ್ನಮತ ಎದ್ದಿದೆ. ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ, ಜನರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. ಮೈತ್ರಿ ಸರ್ಕಾರದ ಮೇಲೆ ಜನ ಬೇಸತ್ತಿದ್ದಾರೆ ಎಂದು ಕೋಟೆ ಎಂ.ಶಿವಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.