ADVERTISEMENT

ರಾಷ್ಟ್ರೀಯ ಹೆದ್ದಾರಿ; ಸುರಕ್ಷತಾ ಕ್ರಮ ಪಾಲಿಸಿ

ಅಪಘಾತಗಳ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ: ಸಂಸದ ಸುನೀಲ್ ಬೋಸ್ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:20 IST
Last Updated 28 ಅಕ್ಟೋಬರ್ 2025, 4:20 IST
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಸುನೀಲ್ ಬೋಸ್ ಮಾತನಾಡಿದರು
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಸುನೀಲ್ ಬೋಸ್ ಮಾತನಾಡಿದರು   

ಚಾಮರಾಜನಗರ: ‘ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಅವೈಜ್ಞಾನಿಕ ರಸ್ತೆ ವಿಭಜಕಗಳ ಲೋಪಗಳನ್ನು ಸರಿಪಡಿಸಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ಲೋಕಸಭಾ ಸದಸ್ಯ ಸುನೀಲ್ ಬೋಸ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು. ಅವೈಜ್ಞಾನಿಕ ಕಾಮಗಾರಿ ನಡೆದಿದ್ದರೆ, ಅವ್ಯವಸ್ಥೆಗಳು ಉಂಟಾಗಿದ್ದರೆ ತಕ್ಷಣ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಸೂಚಿಸಿದರು.

ADVERTISEMENT

ಸಂತೇಮರಹಳ್ಳಿಯಿಂದ ಸತ್ತೇಗಾಲದವರೆಗೆ ನಿರ್ಮಿಸಿರುವ ರಾಷ್ಟ್ರೀಯ ‌ರಸ್ತೆಯಲ್ಲಿ ಕೆಲವೆಡೆ ರಸ್ತೆ ವಿಭಜಕಗಳು, ರಸ್ತೆ ಡುಬ್ಬಗಳು (ಹಂಪ್ಸ್‌), ಸೇತುವೆ ಕಾಮಗಾರಿಗಳು ಅವೈಜ್ಞಾನಿಕವಾಗಿರುವ ಬಗ್ಗೆ ದೂರುಗಳಿವೆ. ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಅಮಾಯಕರು ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರು.

‘ಸಂತೇಮರಹಳ್ಳಿ, ಸತ್ತೇಗಾಲ, ನರೀಪುರ, ದೊಡ್ಡರಾಯಪೇಟೆ, ಸೋಮವಾರಪೇಟೆ ವೃತ್ತದಲ್ಲಿ ಜಂಕ್ಷನ್ ನಿರ್ಮಿಸಲು ಅಧಿಕಾರಿಗಳಿಗೆ ಕಳೆದ ಸಭೆಯಲ್ಲಿ ತಿಳಿಸಿದ್ದರೂ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಮಾಹಿತಿ ಫಲಕಗಳನ್ನು ಸಮರ್ಪಕವಾಗಿ ಅಳವಡಿಸಿಲ್ಲ, ವಿಳಂಬ ಹಾಗೂ ನಿರ್ಲಕ್ಷ್ಯ ಧೋರಣೆ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

‘ನಗರದ ಬಿ.ರಾಚಯ್ಯ ‌ಜೋಡಿರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಆಸ್ತಿಯ ಮಾಲೀಕರಿಗೆ ನಿಗದಿತ ಪರಿಹಾರ ಪಾವತಿಸಿ ರಸ್ತೆ ವಿಸ್ತರಣೆಗೆ ಕ್ರಮ ವಹಿಸಬೇಕು. ಕೋರ್ಟ್ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಶೀಘ್ರ ಪೂರ್ಣಗೊಳಿಸಬೇಕು. ಹೆದ್ದಾರಿ ಕಾಮಗಾರಿ ವಿಳಂಬವಾದಷ್ಟೂ ಪರಿಹಾರ ಸಹಿತ ಕಾಮಗಾರಿಗೆ ಹೆಚ್ಚುವರಿ ಅನುದಾನ ಬೇಕಾಗುವುದರಿಂದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಬೂಬು ಹೇಳದೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ನಿರ್ದೇಶನ ನೀಡಿದರು.

ಪಶುಪಾಲನಾ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಜಾನುವಾರುಗೆ ವಿಮೆ ಮಾಡಿಸಲಾಗುತ್ತಿದ್ದು, ಅಕಸ್ಮಿಕವಾಗಿ ಮರಣ ಹೊಂದುವ ಜಾನುವಾರುಗೆ ಸಕಾಲದಲ್ಲಿ ವಿಮಾ ಹಣ ಪಾವತಿಸಬೇಕು. ಸರ್ಕಾರಿ ಭೂಮಿ, ಕೆರೆ-ಕಟ್ಟೆ, ಸ್ಮಶಾನ, ಗೋಮಾಳ ಒತ್ತುವರಿಯಾಗಿದ್ದಲ್ಲಿ ಕಂದಾಯ ಅಧಿಕಾರಿಗಳು ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಯಳಂದೂರು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ವ್ಯತ್ಯಯವಾಗಿದ್ದು, ಸಮಸ್ಯೆ ಮರುಕಳಿಸದಂತೆ ಕ್ರಮವಹಿಸಬೇಕು. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ರಾತ್ರಿಪಾಳಿಯಲ್ಲಿ ಲಭ್ಯರಿರಬೇಕು. ಜಿಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಸಮರ್ಪಕವಾಗಿ ರೋಗಿಗಳಿಗೆ ಸೇವೆ ಸಿಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಕ್ಷಯ್ ಪ್ರಕಾಶ್‌ಕರ್ ಇದ್ದರು.

‘ಕಾಡಂಚಿನ ಗ್ರಾಮ: ಕುಡಿಯುವ ನೀರು ಕೊಡಿ’

‘ಜಿಲ್ಲೆಯ ಹನೂರು ತಾಲ್ಲೂಕು ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುರಟ್ಟಿ ಹೊಸೂರು ಪಳನಿಮೇಡು ಕೌದಳ್ಳಿ ಭಾಗದಲ್ಲಿ ಅಂತರ್ಜಲ ಕುಸಿದಿದ್ದು ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು’ ಎಂದು ಎಂದು ಸಂಸದ ಸುನೀಲ್ ಬೋಸ್ ಅಧಿಕಾರಿಗಳಿಗೆ ಸೂಚಿಸಿದರು. ‘ಅಮೃತ್‌ ನಗರೊತ್ಥಾನ ಯೋಜನೆಯಡಿ ಮಾಲಂಗಿಯಿಂದ ಚಾಮರಾಜನಗರಕ್ಕೆ ನೀರು ತರುವ ಯೋಜನೆಗೆ ಟೆಂಡರ್ ಅನುಮೋದನೆಯಾಗಿದೆ. ಕಾಮಗಾರಿ ತ್ವರಿತವಾಗಿ ಆರಂಭವಾಗಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡರೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಅರಣ್ಯ ಅಧಿಕಾರಿಗಳು ಅಡ್ಡಿಪಡಿಸದೆ ಸಹಕಾರ ನೀಡಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.