ADVERTISEMENT

ಭೋಪಾಲ್ ನಗರದಲ್ಲಿ ಬಾಲೆಯರ ಕಂಸಾಳೆ  

ರಾಷ್ಟ್ರಮಟ್ಟದ ಬಾಲರಂಗೋತ್ಸವದಲ್ಲಿ ಆದರ್ಶ ವಿದ್ಯಾಲಯ ಮಕ್ಕಳ ನೃತ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:03 IST
Last Updated 14 ನವೆಂಬರ್ 2025, 2:03 IST
ರಾಷ್ಟ್ರಮಟ್ಟದಲ್ಲಿ ಕಂಸಾಳೆ ನೃತ್ಯ ಪ್ರದರ್ಶಿಸಲಿರುವ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿಯರು ಹಾಗೂ ಮುಖ್ಯ ಶಿಕ್ಷಕ ಗುರುಮೂರ್ತಿ
ರಾಷ್ಟ್ರಮಟ್ಟದಲ್ಲಿ ಕಂಸಾಳೆ ನೃತ್ಯ ಪ್ರದರ್ಶಿಸಲಿರುವ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿಯರು ಹಾಗೂ ಮುಖ್ಯ ಶಿಕ್ಷಕ ಗುರುಮೂರ್ತಿ   

ಯಳಂದೂರು: ಕಂಸಾಳೆಯಂತಹ ಈ ನೆಲದ ವಿಶಿಷ್ಟ ಜನಪದ ಕಲೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಲು ಸಜ್ಜಾಗಿದ್ದಾರೆ ತಾಲ್ಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯರು. ನೆಲದ ಸಾಂಸ್ಕೃತಿಕ ಹರಿಕಾರ ಮಾದಪ್ಪನ ಜನಪದ ಮಹಿಮೆಗಳನ್ನು ವಿದ್ಯಾರ್ಥಿಗಳು ಕಂಸಾಳೆಯ ನಾದದಲ್ಲಿ ಹೊರಹೊಮ್ಮಿಸಲಿದ್ದಾರೆ.

ಆದರ್ಶ ಶಾಲೆಯ ವಿದ್ಯಾರ್ಥಿನಿಯರು ಕಂಸಾಳೆ ಬೀಸುತ್ತ, ಹೆಜ್ಜೆ ಹಾಕುತ್ತ, ಮಿಂಚಿನ ವೇಗದಲ್ಲಿ ತಾಳ ಬಡಿಯುತ್ತಿದ್ದರೆ, ನೋಡುಗರ ಹೃದಯ ಬಡಿತ ಹೆಚ್ಚಾಗುತ್ತದೆ. ಗಾಯಕರ ತಾಳ ಹಾಗೂ ವಾದಕರ ಮೇಳದ ಜುಗಲ್‌ಬಂದಿಯಲ್ಲಿ ಕಲಾವಿದರು ನಡೆಸುವ ಕಸರತ್ತು  ಆಕರ್ಷಕ. ಸಮನ್ವಯತೆ ಮತ್ತು ಸಹಕಾರದೊಂದಿಗೆ ವೇಗದ ಚಲನೆಯಲ್ಲಿ ಸಾಗುತ್ತ ಲಯಬದ್ಧವಾಗಿ ತೇಲಿಬರುವ ಹಾಡುಗಾರಿಕೆಗೆ ಒಟ್ಟಾಗಿ ಕುಣಿಯುವ ಕಂಸಾಳೆಯ ಸೊಬಗು ಕಣ್ಮನ ಸೆಳೆಯುತ್ತದೆ. 

ಮೆಲ್ಲಹಳ್ಳಿಯ ಆದರ್ಶ ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು ಪ್ರತಿ ವರ್ಷ ಪಠ್ಯ ಮತ್ತು ಪಠ್ಯೇತರ ಚುಟವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ.

ADVERTISEMENT

ಈ ಬಾರಿ ರಾಜ್ಯದ ಕೆಪಿಎಸ್ ಮತ್ತು ಆದರ್ಶ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ  ಕಂಸಾಳೆ ಕುಣಿತದಲ್ಲಿ ಮೊದಲಿಗರಾಗಿದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಹೊರ ರಾಜ್ಯದಲ್ಲಿ ಜಿಲ್ಲೆಯ ಜನಪದ ಕೀರ್ತಿ ಪತಾಕೆಯನ್ನು ಹಾರಿಸಲು ಸಜ್ಜಾಗಿದ್ದಾರೆ.

‘ವಿದ್ಯಾರ್ಥಿಗಳು 8ರಿಂದ10ನೇ ತರಗತಿ ಕಲಿಯುತ್ತಿದ್ದು, ಕಲೋತ್ಸವ ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಂಸಾಳೆ ಪಟ್ಟುಗಳನ್ನು ಪ್ರದರ್ಶಿಸಲು ನಿತ್ಯವೂ ಅಭ್ಯಾಸ ಮಾಡುತ್ತಿದ್ದಾರೆ. ಬಣ್ಣಬಣ್ಣದ ಪೋಷಾಕು ತೊಟ್ಟು, ಕಂಸಾಳೆ ಹಿಡಿದು, ಬಾಗುತ್ತ, ಜಿಗಿಯುತ್ತ, ಒಬ್ಬರ ತಲೆ ಮೇಲೆ ಮತ್ತೊಬ್ಬರು ಏರಿ, ತ್ರಿಭುಜಾಕೃತಿಯಲ್ಲಿ ಕಂಸಾಳೆ ಪ್ರದರ್ಶಿಸುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿನಿಯರಾದ ರಶ್ಮಿತಾ ಮತ್ತು ಸಾಧನ ಗೌಡ.

‘ಡಿಸೆಂಬರ್‌ 5ರಂದು ಮಧ್ಯಪ್ರದೇಶದ ಭೋಪಾಲ್ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ವಸ್ತು ಸಂಗ್ರಹಾಲಯ ಹಾಗೂ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಸಹಯೋಗದಲ್ಲಿ ರಾಷ್ಟ್ರಮಟ್ಟದ ಬಾಲರಂಗೋತ್ಸವ ನಡೆಯುತ್ತಿದ್ದು 25ಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿಗಳು ಆಯಾ ಪ್ರದೇಶದ ಜನಪದ ಕಲೆ, ಸಂಸ್ಕೃತಿ ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿದ್ದಾರೆ. ಬೆಂಗಳೂರಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಆಯ್ಕೆಯಾದ ತಂಡಗಳು ಇಲ್ಲಿ ಭಾಗವಹಿಸುತ್ತವೆ’ ಎಂದು ಮುಖ್ಯ ಶಿಕ್ಷಕ ಗುರುಮೂರ್ತಿ ಹೇಳಿದರು.

‘ಕಂಸಾಳೆ ಕಲೆಯ ಅಭಿಜಾತ ಪರಂಪರೆಯನ್ನು ಮಕ್ಕಳು ಮುಂದುವರಿಸುವ ಇರಾದೆಯೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ. ಕಂಸಾಳೆ ಕುಣಿತ ಮತ್ತು ಹಾಡಿನ ಲಯವನ್ನು ಹಿಡಿದು ಇತರ ಭಾಷಿಕರಿಗೆ ಮುಟ್ಟಿಸುವ ಜರೂರು ನಮಗಿದೆ.  ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ತಂಡವಾಗಿ  ಹೊರ ರಾಜ್ಯದಲ್ಲಿ ಕಲಾ ಕೌಶಲದೊಂದಿಗೆ ಮಿಂಚುವ ಗುರಿಯೊಂದಿಗೆ ಮಕ್ಕಳಿಗೆ 2 ತಿಂಗಳಿಂದ ತರಬೇತಿ ನೀಡಲಾಗಿದೆ’ ಎಂದು ರಂಗಶಿಕ್ಷಕ ಮಧು ಮಳವಳ್ಳಿ ಹೇಳುತ್ತಾರೆ. 

‘ಅದ್ಭುತ ಪ್ರದರ್ಶನದ ನಿರೀಕ್ಷೆ’

15 ಬಾಲಕಿಯರು ಕಂಸಾಳೆ ನೃತ್ಯ ಪ್ರದರ್ಶಿಸಲಿದ್ದಾರೆ.  ಮಹದೇಶ್ವರನ ಭಕ್ತರಾದ ದೇವರಗುಡ್ಡರು ಬನದಲ್ಲಿ ಸಾಗುವಾಗ ಕಂಸಾಳೆ ಶಬ್ದ ಹೊಮ್ಮಿಸಿ ಹಾಡುತ್ತಿದ್ದರು. ಇದರಂತೆ ‘ಮುಂಗೊಂಡಾದ ಮಾದೇಶ್ವರ ಶರಣು ಶರಣಯ್ಯ’ ಗೀತೆ  ರಚಿತವಾಗಿದ್ದು ಈ   ಹಾಡಿಗೆ ತಮಟೆ ದಮ್ಮಡಿ ಕಂಸಾಳೆಯ ಸಾಂಗತ್ಯ ಹಾಗೂ ಕಚ್ಚೆ ಮತ್ತು ರುದ್ರಾಕ್ಷಿ ಧರಿಸಿದ ಕುವರಿಯರ ನೃತ್ಯ ಭೋಪಾಲ್ ನಗರದಲ್ಲಿ ರಂಗವೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.