ADVERTISEMENT

‘ಬದುಕು ಕಿತ್ತುಕೊಂಡವರಿಗೆ ಕಠಿಣ ಶಿಕ್ಷೆಯಾಗಲಿ’

ಸುಳ್ವಾಡಿ ವಿಷಪ್ರಾಶನ ಪ್ರಕರಣ: ನ್ಯಾಯಕ್ಕಾಗಿ ಸಂತ್ರಸ್ತರ ಮೊರೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:02 IST
Last Updated 14 ನವೆಂಬರ್ 2025, 2:02 IST
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯ (ಸಾಂದರ್ಭಿಕ ಚಿತ್ರ)
ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯ (ಸಾಂದರ್ಭಿಕ ಚಿತ್ರ)   

ಹನೂರು: ಡಿ.14, 2018ರಂದು ತಾಲ್ಲೂಕಿನ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇವಾಲಯದಲ್ಲಿ ನಡೆದಿದ್ದ ವಿಷಪ್ರಾಶನ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ನೀಡಿದ್ದು ದುರಂತದಲ್ಲಿ ಮಡಿದವರ ಕುಟುಂಬ ಸದಸ್ಯರು ಹಾಗೂ ವಿಷಪ್ರಾಷನದಿಂದ ನರಕಯಾತನೆ ಅನುಭವಿಸುತ್ತಿರುವ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾಯಕರ ಸಾವಿಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಬೇಕು, ಜಾಮೀನು ನೀಡುವ ಮೂಲಕ ಜನರು ನ್ಯಾಯಾಂಗ ವ್ಯವಸ್ಥೆಯ ಮೇಲಿಟ್ಟಿರುವ ನಂಬಿಕೆಗೆ ಚ್ಯುತಿ ತರಬಾರದು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ವಿಷಪ್ರಾಶನದಿಂದ ಮಕ್ಕಳು, ಗಂಡ, ಹೆಂಡತಿ ಹಾಗೂ ತಂದೆ ತಾಯಿಗಳನ್ನು ಕಳೆದುಕೊಂಡು ನಿತ್ಯ ನೋವಿನ ನರಕದಲ್ಲಿ ಜೀವನ ಸವೆಸುತ್ತಿದ್ದೇವೆ. ಬದುಕನ್ನೇ ಕಿತ್ತುಕೊಂಡವರಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ನಂಬಿದ್ದವರಿಗೆ ಧಿಗ್ಭ್ರಮೆಯಾಗಿದೆ ಎಂದು ಬಿದರಳ್ಳಿ ಗ್ರಾಮದ ಷಣ್ಮುಗ ಒತ್ತಾಯಿಸಿದರು.

ADVERTISEMENT

ದೇವಸ್ಥಾನದ ಪವಿತ್ರ ಪ್ರಸಾದಕ್ಕೆ ವಿಷ ಬೆರೆಸಿ 17 ಜನ ಅಮಾಯಕರ ಸಾವಿಗೆ ಕಾರಣರಾದವರನ್ನು ದೇವರೂ ಕ್ಷಮಿಸಲಾರ. ನ್ಯಾಯಾಂಗ ವ್ಯವಸ್ಥೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುತ್ತದೆ ಎಂದು ಬಲವಾಗಿ ನಂಬಿದ್ದೇವೆ, ಸಂತ್ರಸ್ತರ ನಂಬಿಕೆ ಹುಸಿಯಾಗದಂತೆ ನೋಡಿಕೊಳ್ಳಬೇಕು. ಆಯೋಪಿಯ ಜಾಮೀನು ರದ್ದುಪಡಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ವಿಷ ಪ್ರಸಾದ ಸೇವಿಸಿ ಕುಟುಂಬಕ್ಕೆ ಆಧಾರವಾಗಿದ್ದ ಗಂಡ ಧಾರುಣವಾಗಿ ಮೃತಪಟ್ಟಿದ್ದಾರೆ. ವಿಷಪ್ರಸಾದ ತಿಂದರೂ ಮೊಮ್ಮಗ ಸಾವು ಗೆದ್ದು ಬಂದಿದ್ದಾನೆ. ಆದರೆ, ಘೋರ ದುರಂತದಲ್ಲಿ ಬದುಕುಳಿದವ ಬಹುತೇಕ ಮಂದಿ ಇಂದಿಗೂ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ವಿಷದ ಪ್ರಭಾವ ಇಂದಿಗೂ ದೇಹದಲ್ಲಿ ಉಳಿದುಕೊಂಡಿದ್ದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಸಂತ್ರಸ್ತರಾದ ಎಂ.ಜಿ.ದೊಡ್ಡಿ ಗ್ರಾಮದ ಮಲ್ಲಿಗೆ ಅಳಲು ತೋಡಿಕೊಂಡರು.

ವಿಷಪ್ರಾಶನ ಘಟನೆ ನಡೆದು 7 ವರ್ಷ ತುಂಬುತ್ತಿದ್ದರೂ ಕರಾಳ ಘಟನೆ ಮನಸ್ಸಿನಿಂದ ಮಾಸಿಲ್ಲ. ದೇವರ ಪ್ರಸಾದ ಸೇವಿಸುವಾಗಲೆಲ್ಲ ಅಂದಿನ ಘಟನೆಯೇ ಕಣ್ಮುಂದೆ ಬರುತ್ತದೆ, ಮಾನಸಿಕ ದೈಹಿಕ ಹಾಗೂ ಆರ್ಥಿಕವಾಗಿ ಕುಗ್ಗಿಹೋಗಿದ್ದೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಇಲ್ಲವಾದರೆ ಸಂತ್ರಸ್ತರೆಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಲ್ಲಿಗೆ ಎಚ್ಚರಿಸಿದರು.

ಪ್ರಕರಣದ ಹಿನ್ನೆಲೆ

ಸುಳ್ವಾಡಿಯಲ್ಲಿರುವ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಟ್ರಸ್ಟಿಗಳ ನಡುವಿನ ಭಿನ್ನಾಭಿಪ್ರಾಯದಿಂದ ವಿಷಬೆರೆಸಿದ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟು 119ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ ಅಂಬಿಕಾ ಮಾದೇಶ ದೊಡ್ಡಯ್ಯ ಎಂಬುವರನ್ನು ಬಂಧಿಸಲಾಗಿತ್ತು. ನಾಲ್ವರು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದ್ದು ಉಳಿದವರು ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.