ADVERTISEMENT

ಯಳಂದೂರು: ಕಾಡುವ ‘ಕಾಡು ಅಣಬೆ’ಗಳ ಜೀವಲೋಕ

ಸ್ಟಾರ್ ಅಣಬೆ, ಶ್ವೇತ ಅಣಬೆ, ತಟ್ಟೆ ಅಣಬೆ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 3:59 IST
Last Updated 2 ಡಿಸೆಂಬರ್ 2025, 3:59 IST
ಯಳಂದೂರು ತಾಲ್ಲೂಕಿನ ಬೆಟ್ಟ, ಗುಡ್ಡ, ಹೊಲ, ಗದ್ದೆಗಳ ಬದಿಗಳಲ್ಲಿ ಕಾಣಸಿಗುವ ಅಣಬೆ
ಯಳಂದೂರು ತಾಲ್ಲೂಕಿನ ಬೆಟ್ಟ, ಗುಡ್ಡ, ಹೊಲ, ಗದ್ದೆಗಳ ಬದಿಗಳಲ್ಲಿ ಕಾಣಸಿಗುವ ಅಣಬೆ   

ಯಳಂದೂರು: ತಾಲ್ಲೂಕಿನ ಕಾಡು, ಹೊಲ, ಗದ್ದೆಗಳಲ್ಲಿ ಈಚೆಗೆ ಸುರಿದ ಮಳೆಗೆ ವೈವಿಧ್ಯಮಯ ಅಣಬೆಗಳು ಕಿಕ್ಕಿರಿದು ಇಣುಕಿವೆ. ಕೆಲವು ಆಹಾರ ಸಂಸ್ಕೃತಿಯ ಭಾಗವಾಗಿ ಗಮನ ಸೆಳೆದರೆ, ಮತ್ತೆ ಕೆಲವು ಆಕರ್ಷಕ ಬಣ್ಣಗಳಿಂದ ಅಚ್ಚರಿ ಹುಟ್ಟಿಸುತ್ತವೆ. ಅಪರೂಪಕ್ಕೆ ಕಾಣಸಿಗುವ ನಕ್ಷತ್ರ ಅಣಬೆ, ಮರ ಅಣಬೆ ಹಾಗೂ ಕಲ್ಲು ಅಣಬೆಗಳ ಪ್ರಭೇದಗಳೂ ಈ ಬಾರಿ ಕಾಣಸಿಗುತ್ತಿವೆ.

ಶಿಲೀಂದ್ರ ಜಾತಿಗೆ ಸೇರಿದ ಅಣಬೆಗಳಲ್ಲಿ ಬಹುತೇಕ ಶ್ವೇತಧಾರಿಗಳೇ ಹೆಚ್ಚು. ಆದರೆ, ವಿಷಕಾರಿ ಅಂಶಗಳನ್ನು ಒಳಗೊಂಡು ಮಾಸಲು, ಕಪ್ಪು, ಹಳದಿ ವರ್ಣಗಳ ಸಂಯೋಜನೆಯಿಂದಲೂ ಅಣಬೆಗಳು ಗಮನ ಸೆಳೆಯುತ್ತಿದ್ದು ಎಚ್ಚರವಾಗಿರಬೇಕು. ಮಳೆ ನಿಂತ ನಂತರ ನವೆಂಬರ್-ಡಿಸೆಂಬರ್ ನಡುವೆ ಅಣಬೆಗಳು ಸಾಮಾನ್ಯವಾಗಿ ಹೆಚ್ಚು ಕಾಣಸಿಗುತ್ತವೆ.

ಮಳೆಗಾಲದ ಆರಂಭದಲ್ಲಿ ಬೆಳೆಯಲು ಶುರು ಮಾಡಿ ಹಳ್ಳಿ, ಗದ್ದೆ, ಹುತ್ತಗಳ ಸುತ್ತಮುತ್ತಲೂ ಅಣಬೆಗಳು ಅರಳುತ್ತವೆ. ಏಲಕ್ಕಿ ತೋಟಗಳು, ಬೆಟ್ಟದ ತುದಿಗಳಲ್ಲಿ ಕೊಳೆತ ಎಲೆ ಹಾಗೂ ಸಸ್ಯ ಭಾಗಗಳ ತೇವಾಂಶದಲ್ಲಿ ಅಣಬೆಗಳು ಹೆಚ್ಚಾಗಿ ಬೆಳೆಯುತ್ತವೆ. ಹುಲ್ಲು ಅಣಬೆ, ತರುಗು ಅಣಬೆ, ಬೇರು ಅಣಬೆ, ಬರ್ಕಟಿ ಅಣಬೆಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇದೆ.

ADVERTISEMENT

ಕಡಿಮೆ ಕೊಬ್ಬು ಹೊಂದಿರುವ ಕಾರಣ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದ್ದು, ಆರೋಗ್ಯಕ್ಕೆ, ಕೂದಲ ವೃದ್ಧಿಗೆ, ಹೃದಯ ಸ್ವಾಸ್ಥ್ಯಕ್ಕೆ ಅಣಬೆಯನ್ನು ಹೆಚ್ಚಾಗಿ ಸೇವಿಸಲಾಗುತ್ತಿದ್ದು ರೋಗ ನಿರೋಧಕ ಶಕ್ತಿಯೂ ಹೆಚ್ಚು ಇರುತ್ತದೆ ಎನ್ನುತ್ತಾರೆ ಗಿಡ ಮೂಲಿಕೆ ತಜ್ಞ ಬೊಮ್ಮಯ್ಯ.

‘ಎಲ್ಲ ಕಾಡು ಅಣಬೆಗಳು ತಿನ್ನಲು ಯೋಗ್ಯವಲ್ಲ. ರುಚಿ, ಪೌಷ್ಟಿಕತೆ, ಆರೋಗ್ಯಕ್ಕೆ ಪೂರಕವಾದರೂ ಕೆಲವು ಅಣಬೆಗಳಲ್ಲಿ ವಿಷಕಾರಿ ಅಂಶಗಳು ಇದೆ. ಹಾಗಾಗಿ, ಆಯ್ಕೆ ಮಾಡುವಾಗ ಪರಿಣತರ ಸಹಾಯ ಪಡೆಯಬೇಕು. ವಿಷಕಾರಿ ಅಲ್ಲ ಎಂದು ಖಚಿತವಾದ ನಂತರವಷ್ವ್ಟೆ ಅಡುಗೆಯಲ್ಲಿ ಬಳಸಬೇಕು’ ಎನ್ನುತ್ತಾರೆ ಅವರು.

ಅಣಬೆಗಳು ಪ್ರಕೃತಿಯ ವಿಷ್ಮಯ ಸಸ್ಯ. ಕೆಲವು ಜಾತಿ ಅಣಬೆಗಳು ರಾತ್ರಿ ಹೊಳೆದು ಹಗಲಿನಲ್ಲಿ ಪ್ರಕಾಶ ಕಳೆದುಕೊಳ್ಳುತ್ತವೆ. ನೆಲದ ಅಡಿ ಇಲ್ಲವೇ ಮರಗಳ ಬುಡದಲ್ಲೂ ಬೆಳೆಯುತ್ತವೆ. ಒಣಗಿದಾಗ ಕಲ್ಲಿನ ತಟ್ಟೆಗಳಂತೆ ಕಾಣಸಿಗುತ್ತವೆ. ಕೃಷಿಯಲ್ಲಿ ಕೀಟನಾಶಕ ಬಳಕೆ ಹಾಗೂ ಅರಣ್ಯ ನಾಶದಿಂದ ಕಾಡು ಅಣಬೆಗಳ ವೈವಿಧ್ಯತೆಗೆ ಅಪಾಯ ಎದುರಾಗಿದೆ ಎನ್ನುತ್ತಾರೆ ಬಿಳಿಗಿರಿಬೆಟ್ಟದ ಏಟ್ರೀ ಕ್ಷೇತ್ರಪಾಲಕ ನಾಗೇಂದ್ರ.

ಔಷಧಗಳ ಆಗರ: 

ಹೇರಳ ಪೋಷಕಾಂಶ ಹೊಂದಿರುವ ಅಣಬೆ ಸಂತತಿಗಳನ್ನು ಸಂರಕ್ಷಿಸಬೇಕಿದೆ. ಉತ್ಕರ್ಷಣ ನಿರೋಧಕ, ಪ್ರತಿರಕ್ಷಣಾ ಪ್ರಚೋದಕ ಹಾಗೂ ಉರಿಯೂತ ಆಂಟಿ ಆಕ್ಸಿಡೆಂಟ್ಆಗಿಯೂ ಬಳಕೆಯಾಗುವ ಅಣಬೆಗಳು ಸಸ್ಯಲೋಕದ ಪರಿಸರ ಬೆಂಬಲಿಸುತ್ತವೆ. ಕಾಡು ಅಣಬೆಗಳನ್ನು ಹಲವು ಔಷಧ ತಯಾರಿಕೆಗೆ ಹಾಗೂ ಹಸಿರು ಜಾತಿ ಅಣಬೆಗಳನ್ನು ಮದ್ದು ತಯಾರಿಸಲು ಉಪಯೋಗಿಸುತ್ತಾರೆ. ಹಾಗಾಗಿ, ಅಣಬೆಗಳನ್ನು ಉಳಿಸಿ ಬೆಳೆಸಬೇಕು ಎನ್ನುತ್ತಾರೆ ಜಿಲ್ಲಾ ಬುಟಕಟ್ಟು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ.

ಸಣ್ಣ ಅಣಬೆಗಳು ಅರಳಿರುವುದು
ಹಳದಿ ಬಣ್ಣದ ಬೆಟ್ಟದ ಅಣಬೆ

ಹೂ ಅಣಬೆ, ಶ್ವೇತ ಅಣಬೆ, ತಟ್ಟೆ, ಕಲ್ಲು ಅಣಬೆ, ಹಳದಿ ಬೆಟ್ಟದಣಬೆ ‘ಎಲ್ಲ ಅಣಬೆಗಳೂ ಸೇವನೆಗೆ ಸೂಕ್ತವಲ್ಲ; ಎಚ್ಚರ ವಹಿಸಿ’ ಔಷಧೀಯ ಗುಣಗಳಾಗಿಯೂ ಬಳಕೆಯಾಗುವ ಅಣಬೆ

‘ಉಳಿಯಬೇಕು ಅಣಬೆ ಪ್ರಬೇಧಗಳು’

ಭಾರತದಲ್ಲಿ ಕೊಡುಗು ಮಲೆನಾಡು ಭಾಗಗಳ ಅಡವಿ ಅಣಬೆಗಳಿಗೆ ವಿಶೇಷ ಮನ್ನಣೆ ಪ್ರಾಪ್ತವಾಗಿದೆ. ಆದರೆ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ತವರಾದ ಬಿಳಿಗಿರಿ ಮಳೆ ಕಾಡುಗಳಲ್ಲೂ ಅಣಬೆಗಳ ವೈವಿಧ್ಯತೆ ಹೆಚ್ಚಿದೆ. ಸ್ಥಳೀಯರ ಆಹಾರ ಪರಂಪರೆಯಲ್ಲೂ ಸ್ಥಾನ ಪಡೆದಿದೆ. ಒಡಿಶಾದಲ್ಲಿ 14 ವಿಭಿನ್ನ ಕಾಡು ಅಣಬೆ ಆಫ್ರಿಕಾದಲ್ಲಿ 480 ಅಣಬೆ ಜಾತಿಗಳನ್ನು ಗುರುತಿಸಲಾಗಿದೆ. ಕೆಲವರಿಗೆ ಅಣಬೆ ಆದಾಯದ ಮೂಲವಾದರೆ ಗಿಡ ಮೂಲಿಕೆಯಾಗಿಯೂ ಬಳಸುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರ ಕ್ರಿಮಿನಾಶಕ ಕಳೆನಾಶಕ ಬೇಡದ ಅಣಬೆಗಳ ಜೀವಜಾಲ ರಕ್ಷಿಸಬೇಕು ಎನ್ನುತ್ತಾರೆ ಸಸ್ಯತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.