ADVERTISEMENT

'ಅಂಬೇಡ್ಕರ್ ಚಿಂತನೆಯಲ್ಲಿ ದೇಶದ ನಡಿಗೆ’

69ನೇ ಮಹಾ ಪರಿನಿರ್ವಾಣ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:40 IST
Last Updated 7 ಡಿಸೆಂಬರ್ 2025, 5:40 IST
ಮಹಾ ಪರಿನಿರ್ವಾಣ ದಿನದ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ  ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಅಧಿಕಾರಿಗಳು, ಗಣ್ಯರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗೌರವ ಸಲ್ಲಿಸಿದರು 
ಮಹಾ ಪರಿನಿರ್ವಾಣ ದಿನದ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ  ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಅಧಿಕಾರಿಗಳು, ಗಣ್ಯರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗೌರವ ಸಲ್ಲಿಸಿದರು    

ಚಿಕ್ಕಬಳ್ಳಾಪುರ: ಬಿ.ಆರ್. ಅಂಬೇಡ್ಕರ್ ಅವರ ರೀತಿಯಲ್ಲಿ ನಿರಂತರ ಅಧ್ಯಯನ ಶೀಲರಾಗಬೇಕು. ಆ ಮೂಲಕ ವಿದ್ಯಾವಂತರಾಗುವ ಜೊತೆಗೆ ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ  ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಜೈ ಭೀಮ್ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಆಯೋಜಿಸಿದ್ದ ಬಿ.ಆರ್. ಅಂಬೇಡ್ಕರ್ ಅವರ 69 ನೇ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಯಾವುದೇ ವ್ಯಕ್ತಿ ಶಿಕ್ಷಣ ಪಡೆದು ಬುದ್ಧಿವಂತನಾದರೆ ಆತನಿಗೆ ಮೋಸ ಮಾಡುವ ಪ್ರಯತ್ನವನ್ನು ಇತರರು ಮಾಡಲಾರರು. ಕೇವಲ ವಿದ್ಯಾವಂತರಾಗುವುದರಿಂದ ಜೀವನದ ಅರ್ಧ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರು.

ADVERTISEMENT

ಶಿಕ್ಷಣ ಪಡೆದವರು ಹುಲಿ ಹಾಲನ್ನು ಕುಡಿದವರಂತೆ ಶಕ್ತಿವಂತರು ಹಾಗೂ ಯುಕ್ತಿವಂತರು ಆಗುತ್ತಾರೆ ಎಂಬ ಮಾತಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಬಾರದು. ಅನಗತ್ಯವಾಗಿ ಮೊಬೈಲ್ ಬಳಸಬಾರದು. ನಿರಂತರವಾಗಿ ಶೈಕ್ಷಣಿಕ ಸಾಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಯಾವುದೇ ವ್ಯಕ್ತಿ ಮೃತರಾದರೆ ಸಾಮಾನ್ಯವಾಗಿ ವೈಕುಂಠ ಸಮಾರಾಧನೆ ಹಾಗೂ ಶಿವಗಣಾರಾಧನೆ ಮತ್ತಿತರ ಕಾರ್ಯ ಮಾಡುತ್ತಾರೆ. ಆದರೆ ದೇಶಕ್ಕೆ ಕೊಡುಗೆ ನೀಡಿದ ಮಹಾತ್ಮರು ಮೃತರಾದರೆ ‘ಮಹಾ ಪರಿನಿರ್ವಾಣ ದಿನ’ ಆಚರಿಸುತ್ತೇವೆ. ಅಂತಹ ಮಹಾತ್ಮರಿಗೆ ಸಾವಿಲ್ಲ ಎಂದರು. 

ಅಂಬೇಡ್ಕರ್ ಅವರ ಅಪರಿಮಿತ ಜ್ಞಾನಕ್ಕೆ ಅಂಬೇಡ್ಕರ್ ಅವರೇ ಸಾಟಿ. ನಾವೆಲ್ಲ ಒಂದೆರಡು ಪದವಿ ಪಡೆದರೆ ನಮಗೆಲ್ಲ ಅಹಂ ಬರುತ್ತವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಅತ್ಯುನ್ನತ ಪದವಿಗಳನ್ನು ಪಡೆದಿದ್ದ ಅಂಬೇಡ್ಕರ್ ಅವರಿಗೆ ಯಾವುದೇ ರೀತಿಯ ಅಹಂ ಇರಲಿಲ್ಲ. ಬದಲಾಗಿ ಬದುಕಿನ ಕೊನೆಯವರೆಗೂ ಅಧ್ಯಯನಶೀಲರಾಗಿದ್ದರು ಎಂದು ಹೇಳಿದರು.

ಅಂಬೇಡ್ಕ‌ರ್ ಅವರ ತತ್ವ ಚಿಂತನೆಗಳ ಬೆಳಕಿನಲ್ಲಿ ಇಂದು ದೇಶ ಸಮರ್ಥವಾಗಿ ಮುಂದುವರೆಯುತ್ತಿದೆ. ಅಪಾರ ಜ್ಞಾನ, ಪಾಂಡಿತ್ಯ ಹೊಂದಿದ್ದ ಅವರು ಜಗತ್ತಿನ ಅಪ್ರತಿಮ ಜ್ಞಾನಿಗಳ ಮತ್ತು ಹೋರಾಟಗಾರರ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಪ್ರಶಂಸಿಸಿದರು.

ಮುಖ್ಯ ಭಾಷಣಕಾರ ಶಿಕ್ಷಕ ಜಗದೀಶ್ ಮುಗಳಿ, ಅಂಬೇಡ್ಕರ್ ಅವರ ಜೀವನ, ಹೋರಾಟ ಹಾಗೂ ಅವರ ಕೊಡುಗೆ ಬಗ್ಗೆ ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದರೆಡ್ಡಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರವೀಣ್ ಪಾಟೀಲ್, ತಹಶೀಲ್ದಾರ್ ರಶ್ಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪುತ್ಥಳಿಗೆ ಗೌರವ ವೇದಿಕೆ

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹಾಗೂ ಗಣ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜೈಭೀಮ್ ವಿದ್ಯಾರ್ಥಿನಿಲಯದ ಆವರಣದಲ್ಲಿರುವ ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.