ADVERTISEMENT

15 ಮಂದಿಗೆ ಜಿಲ್ಲಾ ರಾಜ್ಯೋತ್ಸವದ ಗೌರವ

ಸರ್‌.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಇಂದು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:52 IST
Last Updated 1 ನವೆಂಬರ್ 2025, 6:52 IST
ಕೆ.ಎಂ.ರೆಡ್ಡಪ್ಪ
ಕೆ.ಎಂ.ರೆಡ್ಡಪ್ಪ   

ಚಿಕ್ಕಬಳ್ಳಾಪುರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ 15 ಮಂದಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶನಿವಾರ (ನ.1) ನಗರದ ಸರ್‌.ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಸಾಧಕರನ್ನು ಗೌರವಿಸಲಾಗುತ್ತದೆ.

ಶಿಕ್ಷಣ ಕ್ಷೇತ್ರ: ಶಿಕ್ಷಣ ಕ್ಷೇತ್ರದಲ್ಲಿನ ಕೆಲಸ ಪರಿಗಣಿಸಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಎಂ.ರೆಡ್ಡಪ್ಪ ಮತ್ತು ಉಪನ್ಯಾಸಕಿ ಎಂ.ಎನ್.ಸುಕನ್ಯಾ ಅವರಿಗೆ ಪ್ರಶಸ್ತಿ ನೀಡಲಾಗಿದೆ. 

ನಿವೃತ್ತ ಶಿಕ್ಷಕರೂ ಹಾಗೂ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕೆ.ಎಂ. ರೆಡ್ಡಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. ತಾವು ಕೆಲಸ ಮಾಡಿ ಶಾಲೆಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ.

ADVERTISEMENT

ಎಂ.ಎನ್.ಸುಕನ್ಯಾ, ಪೆರೇಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1998ರಿಂದ 2004 ಮತ್ತು ಗುಡಿಬಂಡೆಯ ಆದರ್ಶ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.

ಕ್ರೀಡೆ: ಯೋಗಪಟು ರವಿಚಂದ್ರ ಎಂ. ಅವರನ್ನು ಕ್ರೀಡಾ ಕ್ರೇತ್ರದ ಕೋಟಾದಡಿ ಆಯ್ಕೆ ಮಾಡಲಾಗಿದೆ. ಅವರ ಬಳಿ ಯೋಗಾಭ್ಯಾಸ ನಡೆಸಿದ ಹಲವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರವಿಚಂದ್ರ ಯೋಗ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.

ಮಾಧ್ಯಮ: ಮಾಧ್ಯಮ ಕ್ಷೇತ್ರದಲ್ಲಿನ ಕೆಲಸಕ್ಕಾಗಿ ಹಿರಿಯ ಪತ್ರಕರ್ತರಾದ ಅಶ್ವತ್ಥನಾರಾಯಣ್ ಎಲ್., ಮುದ್ದುಕೃಷ್ಣ ಬಿ.ಕೆ, ಕಾಗತಿ ನಾಗರಾಜಪ್ಪ ಮತ್ತು ರಾಜಪ್ಪ ಬಿ.ಎಂ. ‌‌ಪ್ರಶಸ್ತಿ ಪಡೆದಿದ್ದಾರೆ. ಜಿಲ್ಲಾ ಲೀಡ್ ಬ್ಯಾಂಕಿನ ಹಣಕಾಸು (ಬ್ಯಾಂಕಿಂಗ್) ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕವಿತಾ ಅವರನ್ನು ಆರ್ಥಿಕ ಕ್ಷೇತ್ರದಲ್ಲಿನ ಕೆಲಸ ಪರಿಗಣಿಸಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ಕಲಾ ಕ್ಷೇತ್ರ: ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದ ರಮೇಶಚಂದ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಚಾರ್ಯ ವಿನ್ಯಾಸ ಶಾಲೆಯ ಸ್ಥಾಪಕ ಪ್ರಾಂಶುಪಾಲರಾಗಿಯೂ ಕೆಲಸ ಮಾಡಿದ್ದಾರೆ. ಬೆಂಗಳೂರು, ಮುಂಬಯಿ, ದೆಹಲಿ ಮತ್ತು ಹೊರದೇಶಗಳಲ್ಲಿಯೂ ಅವರ ಕಲಾಪ್ರದರ್ಶನಗಳು ನಡೆದಿವೆ.

ಖ್ಯಾತ ನಿರ್ದೇಶಕ ಜಿ.ವಿ.ಅಯ್ಯರ್ ಅವರ ಜೊತೆಯೂ ಕೆಲಸ ಮಾಡಿದ್ದಾರೆ. ಚಲನ ಚಿತ್ರ ಮತ್ತು ಧಾರಾವಾಹಿಗಳಲ್ಲಿ ಕಲಾ ನಿರ್ದೇಶನ ಸಹ ಮಾಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಲಾ ಕ್ಷೇತ್ರದಲ್ಲಿ ರಮೇಶ್ ಚಂದ್ರ ಗುರುತಿಸಿಕೊಂಡಿದ್ದಾರೆ.

ಗೊಂಬೆ ಕುಣಿತ, ಕರಡಿ ಕುಣಿತ, ಮರಗಾಲು ಕುಣಿತ, ಕೀಲು ಕುದುರೆ ಕುಣಿತದಲ್ಲಿ  ಪ್ರಸಿದ್ಧದ್ದರಾದ ಚಿಕ್ಕಬಳ್ಳಾಪುರ ತಾಲ್ಲೂಕಿನ ಎಸ್‌.ಗೊಲ್ಲಹಳ್ಳಿಯ ಮಂಜುನಾಥ್ ಜಿ.ಎನ್. ಅವರು ಕಲಾ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ಪಡೆದಿದ್ದಾರೆ. 15ನೇ ವರ್ಷದಿಂದ ಅವರು ಕಲಾ ಕ್ಷೇತ್ರದಲ್ಲಿ ತೊಡಗಿದ್ದಾರೆ. 2022ರಲ್ಲಿ ಮೈಸೂರು ದಸರಾದಲ್ಲಿನ ಮಂಜುನಾಥ್ ಪ್ರದರ್ಶನಕ್ಕೆ ಪ್ರಥಮ ಬಹುಮಾನ ಸಹ ಒಲಿದಿತ್ತು.

ಬಾಗೇಪಲ್ಲಿಯ ಜಿ.ಎನ್.ರಾಮಾಂಜಿನೇಯಲು ನೂರಾರು ಮಂದಿಗೆ ನಾದಸ್ವರ ಕಲಿಸಿದ್ದಾರೆ. ಬೆಂಗಳೂರಿನ ಗಾಯನ ಸಮಾಜ ಸಂಗೀತ ಸಭಾ, ತ್ಯಾಗರಾಜ ಗಾನ ಸಭಾ, ಮೈಸೂರು ದಸರಾ, ಹಂಪಿ ದಸರಾ, ಇಸ್ಕಾನ್, ಸೇರಿದಂತೆ ತಮಿಳುನಾಡಿನ ತಿರುವಯ್ಯರ್ , ಆಂಧ್ರಪ್ರದೇಶದ ತ್ಯಾಗರಾಜ ಆರಾಧನಾ, ಅಹೋಬಲಂಗಳಲ್ಲಿನ ನಾದಸ್ವರ ಕಛೇರಿ ನಡೆಸಿದ್ದಾರೆ. ಸಂಗೀತ ಸ್ವರ ಮಾಂತ್ರಿಕ, ನಾದಸ್ವರ ಸುಧಾ ನಿಧಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಗರಂಜಿತ, ನಾದಕಲಾಮಣಿ ಎಂಬ ಬಿರುದುಗಳನ್ನೂ  ಪಡೆದಿದ್ದಾರೆ. ಈ ಹಿರಿಯ ಕಲಾವಿದರಿಗೆ ಈ ಬಾರಿ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ದೊರೆತಿದೆ.

ಸಮಾಜ ಸೇವೆ: ಚಿಕ್ಕಬಳ್ಳಾಪುರದ ವೆಂಕಟಪತಿ ಎನ್. ಶ್ರೀನಿವಾಸ್ ಸಮಾಜ ಸೇವಾ ಕ್ಷೇತ್ರದಿಂದ ಪ್ರಶಸ್ತಿ ಪಡೆದಿದ್ದಾರೆ. 2020ರಲ್ಲಿ ಕೊರೊನಾ ವಾರಿಯರ್ ತಾಲ್ಲೂಕು ಸಂಯೋಜಕರಾಗಿ 250ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೆಲಸ ಮಾಡಿದ್ದಾರೆ. ಜೇಸಿಐ, ಛಾಯಾಗ್ರಹಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಬಾಗೇಪಲ್ಲಿಯ ಶ್ವೇತಾ ಎಂ ಗಂಜೂಮ್ 20 ವರ್ಷಗಳಿಂದ‌ ಸಮಾಜಸೇವೆಯಲ್ಲಿ ಗುರ್ತಿಸಿಕೊಂಡಿದ್ದಾರೆ. ವಾಸವಿ ಫೌಂಡೇಶನ್ ಜಾಗತಿಕ ಕಾರ್ಯದರ್ಶಿ, ವಾಸವಿ ಇನ್ಫೋಸಿಸ್ ನಿರ್ದೇರ್ಶಕಿ, ಆರ್ಯ ವೈಶ್ಯ ಮಹಾಮಂಡಳಿ ರಾಜ್ಯ ವಕ್ತಾರರಾಗಿ ಕೆಲಸ ಮಾಡಿದ್ದಾರೆ. ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ, ನಂದಿ  ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಗುಡಿಬಂಡೆ ತಾಲ್ಲೂಕಿನ ತಿಮ್ಮೇನಹಳ್ಳಿ ಗ್ರಾಮ ಕೃಷ್ಣೇಗೌಡ ಅವರಿಗೆ ಸಮಾಜ ಸೇವೆ ಹಿನ್ನೆಲೆಯಲ್ಲಿ ಪ್ರಶಸ್ತಿ ದೊರೆತಿದೆ. ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಗುಡಿಬಂಡೆ ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾಗಿದ್ದಾರೆ. 

ಚಿಂತಾಮಣಿಯ ನಿವೃತ್ತ ಶಿಕ್ಷಣ ಶ್ರೀನಿವಾಸನ್ ಎನ್.ವಿ ಹಲವು ವರ್ಷಗಳಿಂದ ಕನ್ನಡ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ತು, ಸಿರಿಗನ್ನಡ ವೇದಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಸಂಘಟಿಸಿದ್ದಾರೆ.ಚಿಂತಾಮಣಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗಡಿ ತಾಲ್ಲೂಕಿನಲ್ಲಿ ಕನ್ನಡವನ್ನು ಕಟ್ಟುವಲ್ಲಿ ಶ್ರಮಿಸಿದ್ದಾರೆ. 

ಹೀಗೆ ಜಿಲ್ಲೆಯ 15 ಮಂದಿ ಸಾಧಕರು ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಾಗತಿ ನಾಗರಾಜ್
ಮಂಜುನಾಥ್
ವೆಂಕಟಪತಿ ಶ್ರೀನಿವಾಸ್
ಸುಕನ್ಯಾ
ಮುದ್ದುಕೃಷ್ಣ
ಕವಿತಾ
ರವಿಚಂದ್ರ
ಅಶ್ವತ್ಥನಾರಾಯಣ್
ರಮೇಶ್ ಚಂದ್ರ
ರಾಮಾಂಜಿನೇಯಲು
ಶ್ವೇತಾ
ರಾಜಪ್ಪ
ಶ್ರೀನಿವಾಸನ್ ಎನ್.ವಿ
ಕೃಷ್ಣೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.