ADVERTISEMENT

ಬಾಗೇಪಲ್ಲಿ ಎಪಿಎಂಸಿ: 11 ಹುದ್ದೆಯೂ ಖಾಲಿ– ಸಂಕಷ್ಟದಲ್ಲಿ ರೈತರು

Bagepalli: ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಇಲ್ಲದೇ ಸಂಕಷ್ಟದಲ್ಲಿ ರೈತರು

ಪಿ.ಎಸ್.ರಾಜೇಶ್
Published 17 ಜುಲೈ 2025, 7:53 IST
Last Updated 17 ಜುಲೈ 2025, 7:53 IST
ಬಾಗೇಪಲ್ಲಿ ಪಟ್ಟಣದ ಟಿಬಿ ಕ್ರಾಸ್‍ನಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ 
ಬಾಗೇಪಲ್ಲಿ ಪಟ್ಟಣದ ಟಿಬಿ ಕ್ರಾಸ್‍ನಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ    

ಬಾಗೇಪಲ್ಲಿ: ಪಟ್ಟಣದ ಟಿಬಿ ಕ್ರಾಸ್‌ನಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಮಂಜೂರಾದ 11 ಹುದ್ದೆಗಳ ಪೈಕಿ ಎಲ್ಲಾ ಹುದ್ದೆಗಳು ಖಾಲಿ ಇವೆ. ಇಬ್ಬರು ಅಧಿಕಾರಿಗಳು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಟೊಮೆಟೊ, ಕ್ಯಾರೆಟ್, ಬೀಟ್‍ರೂಟ್, ಮೂಲಂಗಿ, ಗಡ್ಡೆಕೋಸು, ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಬದನೆ, ಬೆಂಡೆ, ಬೀನ್ಸ್ ಸೇರಿದಂತೆ ಎಲ್ಲಾ ರೀತಿಯ ತರಕಾರಿ ಹೆಚ್ಚಾಗಿ ಬೆಳೆಯುತ್ತಾರೆ. ಚೇಳೂರು ಸೇರಿದಂತೆ ಆಂಧ್ರದ ಹಿಂದೂಪೂರ, ಚಿಲಮತ್ತೂರು, ಪೆನುಕೊಂಡ, ಪುಟ್ಟಪರ್ತಿ ಸೇರಿದಂತೆ ವಿವಿಧ ಭಾಗದ ರೈತರು ಮಾರುಕಟ್ಟೆಗೆ ತರಕಾರಿ ಸಾಗಿಸುತ್ತಾರೆ.

ಕೋಟ್ಯಂತರ ರೂಪಾಯಿ ವಹಿವಾಟು ಆಗುವ ಈ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಇದೀಗ ಆಡಳಿತ ಮಂಡಳಿ, ಅಧಿಕಾರಿಗಳು ಇಲ್ಲ. ರೈತರಿಗೆ ಕನಿಷ್ಠ ಸೌಲಭ್ಯಗಳು ಸಿಗುತ್ತಿಲ್ಲ.

ADVERTISEMENT

ಅಧಿಕಾರಿ, ಆಡಳಿತ ವರ್ಗ ಇಲ್ಲದೇ, ಎಪಿಎಂಸಿಯಲ್ಲಿ ದಲ್ಲಾಳಿಗಳದ್ದೇ ಕಾರುಬಾರು. 5 ಕೆ.ಜಿ ಹೆಚ್ಚು ತರಕಾರಿಯನ್ನು ರೈತರಿಂದ ನೇರವಾಗಿ ವ್ಯಾಪಾರಸ್ಥರು ಖರೀದಿ ಮಾಡುವಂತೆ ಇಲ್ಲ. ದಲ್ಲಾಳಿಗಳ ಮೂಲಕ ತರಕಾರಿ ವ್ಯಾಪಾರ ನಡೆಯುತ್ತಿದೆ.

ಮಂಜೂರಾದ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಕಾರ್ಯದರ್ಶಿ ಹಾಗೂ ಲೆಕ್ಕಾಧಿಕಾರಿ ಪ್ರಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಹಾಯಕ ಕಾರ್ಯದರ್ಶಿ 1, ಲೆಕ್ಕಾಧಿಕಾರಿ 1, ದ್ವಿತೀಯ ದರ್ಜೆ ಸಹಾಯಕ 1, ಡಿ ಗ್ರೂಪ್ ನೌಕರರು 2 ಹಾಗೂ ಮಾರುಕಟ್ಟೆ ಸೂಪರ್‌ ವೈಸರ್‌ 4 ಹುದ್ದೆ ಖಾಲಿ ಇವೆ.

ಇದೀಗ ತಹಶೀಲ್ದಾರ್ ಮನೀಷಾ ಎನ್.ಪತ್ರಿ ಆಡಳಿತ ಅಧಿಕಾರಿ ಆಗಿದ್ದಾರೆ.  ಅಧಿಕಾರಿ ವರ್ಗ ಇಲ್ಲದೇ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದೆ. ಶೌಚಾಲಯ, ಕ್ಯಾಂಟಿನ್ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಅನೇಕ ವರ್ಷಗಳಿಂದ ರಿಪೇರಿ ಆಗಿಲ್ಲ. ವ್ಯಾಪಾರಸ್ಥರು, ದಲ್ಲಾಳಿಗಳು, ರೈತರು ಎಲ್ಲೆಂದರಲ್ಲಿ ತರಕಾರಿ ಎಸೆದಿದ್ದಾರೆ. ರಾಶಿಗಟ್ಟಲೆ ಕೊಳೆತ ತರಕಾರಿ ಇವೆ.

ಎಪಿಎಂಸಿಯಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದೆ. ರೈತರಿಗೆ ಮೋಸ ಆಗುತ್ತಿರುವ ಬಗ್ಗೆ, ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಂಚಾಲಕ ಡಿ.ಟಿ.ಮುನಿಸ್ವಾಮಿ ತಿಳಿಸಿದರು.

ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕಚೇರಿ ಅಧಿಕಾರಿ ಮಂಜುನಾಥ್ ತಿಳಿಸಿದರು.

ಕಚೇರಿ ಪಕ್ಕದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿಗ ಘಟಕ ಕೆಟ್ಟಿರುವುದು

Quote - 30 ವರ್ಷಗಳಿಂದ ಮಾರುಕಟ್ಟೆಗೆ ತರಕಾರಿ ತರುತ್ತೇನೆ. ಕಮಿಷನ್ ಕಾಟ ಇದೆ. ರೈತರಿಗೆ ಕನಿಷ್ಠ ಸೌಲಭ್ಯ ಇಲ್ಲ. ನೀರು ಶೌಚಾಲಯ ರೈತ ಭವನ ಇಲ್ಲ. ರೈತರ ಸಮಸ್ಯೆ ಕೇಳುವವರು ಯಾರೂ ಇಲ್ಲ ವೆಂಕಟರಾಮಪ್ಪ ಕಲ್ಲಿಪಲ್ಲಿ ರೈತ

Quote - ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ಹುದ್ದೆ ಖಾಲಿ ಇವೆ. ಕೃಷಿಕರ ಪರ ಎಂದು ಹೇಳುವ ಸರ್ಕಾರಕ್ಕೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಚ್.ಎನ್.ಗೋವಿಂದರೆಡ್ಡಿ ರಾಜ್ಯ ರೈತ ಸಂಘದ ಅಧ್ಯಕ್ಷ

Quote - ಎಪಿಎಂಸಿಯಲ್ಲಿ ಸ್ವಚ್ಛತೆ ಮಾಡಿಸುವವರು ಇಲ್ಲ. ನೊಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸರ್ಕಾರ ಕೂಡಲೇ ಕಾಯಂ ಅಧಿಕಾರಿಗಳನ್ನು ನೇಮಕ ಮಾಡಿ ರೈತರ ಸಂಕಷ್ಟ ಬಗೆಹರಿಸಬೇಕು ಕಡೇಹಳ್ಳಿ ಶಿವಪ್ಪ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.