ADVERTISEMENT

ದಾಖಲೆ ಇಲ್ಲದ ಶಾಲಾ ವಾಹನಗಳ ಮೇಲೆ ಕ್ರಮ

ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತ l ಖಾಸಗಿ ಶಾಲೆಗಳಿಗೆ ಡಿವೈಎಸ್‌ಪಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 3:10 IST
Last Updated 28 ಅಕ್ಟೋಬರ್ 2025, 3:10 IST
ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಖಾಸಗಿ ಶಾಲಾ, ಕಾಲೇಜುಗಳ ಮುಖ್ಯಸ್ಥರ ಸಭೆಯಲ್ಲಿ ಡಿವೈಎಸ್‌ಪಿ ಮುರಳೀಧರ್ ಮಾತನಾಡಿದರು
ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಖಾಸಗಿ ಶಾಲಾ, ಕಾಲೇಜುಗಳ ಮುಖ್ಯಸ್ಥರ ಸಭೆಯಲ್ಲಿ ಡಿವೈಎಸ್‌ಪಿ ಮುರಳೀಧರ್ ಮಾತನಾಡಿದರು   

ಚಿಂತಾಮಣಿ: ಖಾಸಗಿ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಯು ಮಕ್ಕಳ ದಾಖಲಾತಿಗಷ್ಟೇ ಸೀಮಿತವಾಗದೆ, ಆ ಮಕ್ಕಳ ಸುರಕ್ಷತೆ ಬಗ್ಗೆಯೂ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಡಿವೈಎಸ್‌ಪಿ ಪಿ. ಮುರಳೀಧರ್ ಸೂಚಿಸಿದರು. 

ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಸಭೆಗಳಲ್ಲಿ ಮಕ್ಕಳ ಸುರಕ್ಷತಾ ಕ್ರಮಗಳ ಬಗ್ಗೆ ಪೋಷಕರಲ್ಲೂ ಜಾಗೃತಿ ಮೂಡಿಸಬೇಕು ಎಂದು ಶಾಲಾ ಆಡಳಿತ ಮಂಡಳಿಗಳಿಗೆ ಅವರು ಸೂಚಿಸಿದರು. 

ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬುರುಡಗುಂಟೆ ಬಳಿ ಇತ್ತೀಚೆಗೆ ಸಂಭವಿಸಿದ ಶಾಲಾ ವಾಹನ ಮತ್ತು ದ್ವಿಚಕ್ರ ವಾಹನದ ಮಧ್ಯೆ ಡಿಕ್ಕಿಯಾಗಿ ನಾಲ್ವರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಸೋಮವಾರ ನಗರ ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲಾ, ಕಾಲೇಜುಗಳ ಮುಖ್ಯಸ್ಥರ ಸಭೆ ಕರೆಯಲಾಗಿತ್ತು. 

ADVERTISEMENT

ಸಭೆಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿನ ಒಟ್ಟಾರೆ ಶಾಲಾ ಕಾಲೇಜುಗಳ ವಾಹನಗಳ ಪೈಕಿ 63 ವಾಹನಗಳಿಗೆ ಎಫ್.ಸಿ ಮತ್ತು ವಿಮೆ ಅವಧಿ ಮುಕ್ತಾಯವಾಗಿದ್ದು, ಅವುಗಳನ್ನು ನವೀಕರಣ ಮಾಡಿಲ್ಲ. ಸಾರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದರೂ, ಯಾರೂ ಸ್ಪಂದಿಸಿಲ್ಲ. ಇದೇ ರೀತಿ ಬೇಜವಾಬ್ದಾರಿ ತೋರಿದಲ್ಲಿ, ಕಾನೂನು ಪಾಲನೆ ಮಾಡದ ವಾಹನಗಳನ್ನು ವಶಕ್ಕೆ ಪಡೆದು, ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟರು. ಆ ಮನೆಯ ಮಹಿಳೆಯ ಪರಿಸ್ಥಿತಿ ಊಹಿಸಿಕೊಳ್ಳಿ. ಇದೇ ಪರಿಸ್ಥಿತಿ ನಮ್ಮ ಮನೆಯವರಿಗೆ ಎದುರಾದರೆ ಹೇಗಿರುತ್ತದೆ ಎಂಬುದನ್ನು ಚಿಂತಿಸಿ ಎಂದು ಹೇಳಿದರು. 

ಅಪ್ರಾಪ್ತ ವಯಸ್ಕರಿಗೆ ವಾಹನ ನೀಡಬಾರದು ಎಂದು ಪೋಷಕರಿಗೆ ಮನವರಿಕೆ ಮಾಡಬೇಕು. ಜನರು ಬಹಳ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ. ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಪ್ರಾಥಮಿಕ ಹಂತದಿಂದಲೇ ಜಾಗೃತಿ ಮೂಡಿಸಬೇಕು. ವಾಹನಗಳಲ್ಲಿ ನಿಗದಿತಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಕೊಂಡೊಯ್ಯಬಾರದು. ಒಂದು ಆಟೊದಲ್ಲಿ 20–25 ಮಕ್ಕಳನ್ನು ಸಾಗಿಸಿದರೆ ಕುರಿಗಳಿಗೂ ಮಕ್ಕಳಿಗೂ ಇರುವ ವ್ಯತ್ಯಾಸವೇನು ಎಂದು ಪ್ರಶ್ನಿಸಿದರು. 

ಬ್ರೇಕ್ ಇನ್‌ಸ್ಪೆಕ್ಟರ್ ಪೂಜಾ ಮಾತನಾಡಿ, 63 ವಾಹನಗಳಿಗೆ ಎಫ್.ಸಿ, ಇನ್ಶೂರೆನ್ಸ್ ಇಲ್ಲ ಎಂದು ನೋಟಿಸ್ ನೀಡಲಾಗಿತ್ತು. ಕೇವಲ ಐದು ವಾಹನಗಳ ಮಾಲೀಕರು ಮಾತ್ರವೇ ವಿಮೆ ಮತ್ತು ಎಫ್.ಸಿ ನವೀಕರಣ ಮಾಡಿಸಿಕೊಂಡಿದ್ದಾರೆ. ಹಲವರು ತೆರಿಗೆ ಪಾವತಿ ಮಾಡಿಲ್ಲ. ಶಾಲೆಗಳಿಗೆ ₹80, ಕಾಲೇಜುಗಳಿಗೆ ₹200  ತೆರಿಗೆ ಇದೆ. ಶಾಲೆಗಳ ಹೆಸರಿನಲ್ಲಿ ಮಾತ್ರ ತೆರಿಗೆ ಕಟ್ಟಿ, ಕಾಲೇಜುಗಳಿಗೆ ಓಡಿಸುತ್ತಾರೆ. ಪ್ರತಿಯೊಂದು ವಾಹನದ ಎಫ್.ಸಿ. ಇನ್ಶೂರೆನ್ಸ್ ನವೀಕರಿಸಿಕೊಳ್ಳಬೇಕು. ಚಾಲಕರು ಪರವಾನಗಿ ಹೊಂದಿರಬೇಕು. ಚಾಲಕರ ಮಾಹಿತಿಯನ್ನು ಕಡ್ಡಾಯವಾಗಿ ವಾಹನದಲ್ಲಿ ಹಾಕಿರಬೇಕು. ಪ್ರತಿಯೊಂದು ವಾಹನದಲ್ಲೂ ಮಹಿಳಾ ಅಟೆಂಡರ್ ಇರಬೇಕು ಎಂದು ಹೇಳಿದರು.
ಇನ್‌ಸ್ಪೆಕ್ಟರ್ ವಿಜಿಕುಮಾರ್, ಶಾಲಾ, ಕಾಲೇಜುಗಳ ಮುಖ್ಯಸ್ಥರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.