
ಚಿಂತಾಮಣಿ: ತಾಲ್ಲೂಕಿನ ಕೈವಾರ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ–ಜೆಡಿಎಸ್ ಮೈತ್ರಿಯ ಬೆಂಬಲಿತ ಮುಖಂಡರು ಮತ್ತು ಕಾರ್ಯದರ್ಶಿ ಮಧ್ಯೆ ಸೋಮವಾರ ವಾಗ್ವಾದ ನಡೆಯಿತು.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಎನ್‌ಡಿಎ ಒಕ್ಕೂಟದ ಬೆಂಬಲಿತ ಮುಖಂಡರು, ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘದ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರುಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿದ್ದರು.
ಚುನಾವಣಾ ಅಧಿಕಾರಿ ಶುಭಾ ಅವರು ಸೋಮವಾರ ಸಂಘದ ಕಚೇರಿಗೆ ಆಗಮಿಸುತ್ತಿದ್ದಂತೆ, ಬಿಜೆಪಿ–ಜೆಡಿಎಸ್ ಬೆಂಬಲಿತ ಮುಖಂಡರು, ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ಮೊದಲ ಇದನ್ನು ಪರಿಶೀಲಿಸಬೇಕು. ಆ ನಂತರಷ್ಟೇ ಚುನಾವಣಾ ಪ್ರಕ್ರಿಯೆ ನಡೆಸಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಶುಭಾ, ‘ನನ್ನನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದ್ದರೆ, ಕಾರ್ಯದರ್ಶಿ ಬಳಿ ಬಗೆಹರಿಸಿಕೊಳ್ಳಿ’ ಎಂದು ಹೇಳಿದರು.
ಅಕ್ರಮ ಸರಿಪಡಿಸಬೇಕು ಎಂದು ಸೊಸೈಟಿ ಕಾರ್ಯದರ್ಶಿ ರಾಜಕುಮಾರ್ ಅವರ ಬಳಿಯೂ ಒತ್ತಾಯಿಸಲಾಯಿತು. ಈ ಕುರಿತು ಲಿಖಿತವಾಗಿ ಮಾಹಿತಿ ಕೋರಿದಲ್ಲಿ, ಚುನಾವಣಾ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಮೇಲಧಿಕಾರಿಗಳ ಗಮನಕ್ಕೆ ತಂದು ಉತ್ತರ ನೀಡುತ್ತೇನೆ ಎಂದು ಕಾರ್ಯದರ್ಶಿ ತಿಳಿಸಿದರು. ಈ ವೇಳೆ ಕಾರ್ಯದರ್ಶಿ ಮತ್ತು ಷೇರುದಾರರ ಮಧ್ಯೆ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಅನುವು ಮಾಡಿಕೊಟ್ಟರು. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಯಿತು. ಚುನಾವಣಾಧಿಕಾರಿ ನಾಮಪತ್ರ ಸ್ವೀಕರಿಸಿದರು.
ದಾಖಲೆಗಳ ಪ್ರಕಾರ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಕಾರ್ಯದರ್ಶಿ ಸ್ಪಷ್ಟಪಡಿಸಿದರು.
ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಕೆಲವರ ಹೆಸರು ಸೇರಿಸಿರುವುದು ಎಷ್ಟು ಸರಿ ಎಂದು ಎನ್‌ಡಿಎ ಬೆಂಬಲಿತರಾದ ದೊಡ್ಡಹಳ್ಳಿ ಗೋಪಾಲಕೃಷ್ಣ, ಗ್ರಾ.ಪಂ.ಮಾಜಿ ಸದಸ್ಯ ರಾಮಚಂದ್ರಪ್ಪ ಮತ್ತಿತರರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.