ADVERTISEMENT

ತಣ್ಣನೆಯ ವಾತಾವರಣ; ಕುರಿಗಾಹಿಗಳಿಗೆ ಸಂಕಷ್ಟ

ಸೂರ್ಯನ ದರ್ಶನವಿಲ್ಲ; ಕುರಿಗಳಿಗೆ ಅನಾರೋಗ್ಯ 

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:47 IST
Last Updated 7 ಡಿಸೆಂಬರ್ 2025, 5:47 IST
ಮಲ್ಲೇಪಲ್ಲಿ ಬಳಿ ಮೇಯಿಸಲು ಕುರಿಗಳನ್ನು ಕರೆದೊಯ್ಯುತ್ತಿರುವ ಕುರಿಗಾಹಿಗಳು 
ಮಲ್ಲೇಪಲ್ಲಿ ಬಳಿ ಮೇಯಿಸಲು ಕುರಿಗಳನ್ನು ಕರೆದೊಯ್ಯುತ್ತಿರುವ ಕುರಿಗಾಹಿಗಳು    

ಚೇಳೂರು: ಕಳೆದ ಒಂದು ವಾರದಿಂದ ಚೇಳೂರು ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ತೀವ್ರವಾದ ಚಳಿ ಇದೆ. ವಾತಾವರಣದಲ್ಲಿ ಉಷ್ಣಾಂಶ ಕುಸಿದಿದೆ. ಇದು ಕುರಿಗಾಹಿಗಳ ಬದುಕಿಗೂ ಸಂಕಷ್ಟ ತಂದೊಡ್ಡಿದೆ. 

ತಾಲೂಕಿನಾದ್ಯಂತ ಈ ವರ್ಷದ ಚಳಿಗಾಲವು ಕುರಿ ಸಾಕಾಣಿಕೆದಾರರು ಮತ್ತು ಕುರಿಗಳ ಪಾಲಿಗೆ ಕಠಿಣ ಸವಾಲು ಒಡ್ಡಿದೆ. ಕಳೆದ  ಒಂದು ವಾರದಿಂದ ಸೂರ್ಯನ ದರ್ಶನವಿಲ್ಲ. ಇಡೀ ದಿನ ದಟ್ಟ ಮಂಜು ಮುಸುಕಿದ ವಾತಾವರಣವು ತೀವ್ರ ಚಳಿಯನ್ನು ಸೃಷ್ಟಿಸಿದೆ.

ಹಗಲು ಮಂಜಿನ ಹೊದಿಕೆ ಆವರಿಸಿರುವ ಕಾರಣ ಉಷ್ಣಾಂಶವು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಇದು ಕುರಿಗಾಹಿಗಳ ದೈನಂದಿನ ಬದುಕಿನ ಮೇಲೆ ಮತ್ತು ಸಾವಿರಾರು ಕುರಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕುರಿ ಸಾಕಾಣಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳು ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿವೆ.

ADVERTISEMENT

ಸತತ ಮಂಜಿನ ವಾತಾವರಣ ಮತ್ತು ತೇವಾಂಶದಿಂದ ಕುರಿಗಳು ಶೀತಕ್ಕೆ ತುತ್ತಾಗುತ್ತಿವೆ. ಪ್ರಸ್ತುತ ಅನೇಕ ಕುರಿಗಳಲ್ಲಿ ಶೀತ, ಕೆಮ್ಮು ಮತ್ತು ನ್ಯುಮೋನಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ವಿಶೇಷವಾಗಿ ನವಜಾತ ಕುರಿ ಮರಿಗಳು ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮರಿಗಳ ಸಾವಿನ ದವಡೆಗೆ ಸಿಲುಕುವ ಆತಂಕ ಕುರಿಗಾಹಿಗಳನ್ನು ಕಾಡುತ್ತಿದೆ.

ವಾತಾವರಣದ ತಂಪಿನಿಂದಾಗಿ ಕುರಿಗಳು ಮೇವು ತಿನ್ನುವುದನ್ನು ಕಡಿಮೆ ಮಾಡಿವೆ. ಕುರಿಗಾಹಿಗಳು ತೀವ್ರ ಚಳಿಯಲ್ಲೇ ರಾತ್ರಿ ವೇಳೆ ಕುರಿಮಂದೆಗಳನ್ನು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.  

ಪಶು ಸಂಗೋಪನಾ ಇಲಾಖೆಯು ಕುರಿಗಳ ಆರೋಗ್ಯ ತಪಾಸಣೆ, ಚಳಿಗಾಲದ ಕಾಯಿಲೆಗಳಿಗೆ ಅಗತ್ಯವಿರುವ ಲಸಿಕೆ ಹಾಗೂ ಔಷಧಗಳನ್ನು ಉಚಿತವಾಗಿ ಒದಗಿಸಬೇಕು ಎಂದು ಕುರಿಗಾಹಿಗಳು ಒತ್ತಾಯಿಸಿದ್ದಾರೆ. 

ರಮೇಶ್ 
ಅಮಾನುಲ್ಲಾ

ಕುರಿಗಳು ದುರ್ಬಲ

ಚಳಿಯಿಂದ  ಕುರಿಗಳು ದುರ್ಬಲಗೊಳ್ಳುತ್ತಿವೆ. ರೋಗ ಬಂದು ಈಗಾಗಲೇ ಕೆಲವು ಕುರಿಗಳು ಮೃತಪಟ್ಟಿವೆ. ನಷ್ಟ ಉಂಟಾಗಿದೆ. ನಮ್ಮ ಇಡೀ ಕುಟುಂಬದ ಜೀವನ ಈ ಕುರಿಗಳ ಮೇಲೆ ನಿಂತಿದೆ. ಆದ್ದರಿಂದ ಸರ್ಕಾರ ಕೂಡಲೇ ನಮಗೆ ಆರ್ಥಿಕ ಸಹಾಯ ಮತ್ತು ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ಒದಗಿಸಬೇಕು.  ರಮೇಶ್ ಮರವಪಲ್ಲಿ ಚೇಳೂರು ತಾಲ್ಲೂಕು ಉಚಿತ ಲಸಿಕೆ ಒದಗಿಸಿ ಒಂದು ವಾರದಿಂದ ಬಿಸಿಲು ಇಲ್ಲದೆ ತೀವ್ರ ಚಳಿಯಿಂದ ನಮ್ಮ ಕುರಿಮರಿಗಳು ತತ್ತರಿಸಿವೆ. ಅನೇಕ ಕುರಿಗಳಿಗೆ ಕೆಮ್ಮು ಮತ್ತು ಶೀತ ಕಾಣಿಸಿಕೊಂಡಿದೆ. ನಮಗೆ ರಾತ್ರಿ ನಿದ್ದೆ ಇಲ್ಲ. ನಮ್ಮ ಬದುಕು ಇದರ ಮೇಲೆ ಅವಲಂಬಿತವಾಗಿರುವುದರಿಂದ ಸರ್ಕಾರ ಕೂಡಲೇ ಉಚಿತ ಲಸಿಕೆ ಮತ್ತು ಔಷಧಗಳನ್ನು ಒದಗಿಸಬೇಕು. ಅಮಾನುಲ್ಲಾ ಕುರಿಗಾಹಿ ಮಲ್ಲೇಪಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.