ಚಿಕ್ಕಬಳ್ಳಾಪುರ: ನಗರದ ಜಿಲ್ಲಾಡಳಿತ ಭವನ (ಪ್ರಜಾಸೌಧ) ಹೊರಭಾಗದಲ್ಲಿ ಪ್ರತಿಭಟನೆ ನಡೆಸಲು ಇನ್ನು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅಲ್ಲದೆ ಈ ಕೋರಿಕೆಗೆ ಪೊಲೀಸರು ಸಹ ನಿಶಾನೆ ತೋರಬೇಕು. ಆಗ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ದೊರೆಯುತ್ತದೆ!
ಹೌದು ಜಿಲ್ಲಾಡಳಿತ ಭವನದ ಆವರಣದ ಹೊರಭಾಗದಲ್ಲಿ ಅಂದರೆ ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸಲು ಸಹ ಜಿಲ್ಲಾಡಳಿತ ಒಪ್ಪಿಗೆ ನೀಡಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಸಹ ಹೊರಡಿಸಿದ್ದಾರೆ.
‘ಪ್ರಜಾಸೌಧದ ಆವರಣದ ಹೊರಭಾಗದಲ್ಲಿ ಅನುಮತಿ ಪಡೆಯದೆ ಚಳವಳಿಗಳನ್ನು ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಇನ್ನು ಮುಂದೆ ಯಾವುದೇ ಚಳವಳಿ ಮಾಡಬೇಕಾದಲ್ಲಿ 10 ದಿನಗಳ ಮುಂಚಿತವಾಗಿ ಅನುಮತಿ ಪಡೆಯಲು ಈ ಕಚೇರಿಗೆ ಪತ್ರ ಸಲ್ಲಿಸಬೇಕು. ತಾವು ಸಲ್ಲಿಸಿದ ಕೋರಿಕೆಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿ ಸದರಿ ಇಲಾಖೆಯಿಂದ ಪರಿಶೀಲಿಸಿ ಅನುಮತಿ ನೀಡುವ ಕುರಿತು ಈ ಕಚೇರಿಗೆ ಪ್ರಸ್ತಾವ ಸಲ್ಲಿಸಿದಲ್ಲಿ ಚಳವಳಿ ನಡೆಸಲು ಅನುಮತಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಸಂಘಟನೆಗಳ ಆಕ್ರೋಶ: ಹೀಗೆ ಜಿಲ್ಲಾಡಳಿತ ಭವನದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯಬೇಕು ಎನ್ನುವ ಜಿಲ್ಲಾಡಳಿತದ ಆದೇಶಕ್ಕೆ ನಾಗರಿಕರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು ಪ್ರತಿಭಟನೆಯ ಹಕ್ಕು ಕಸಿಯುವ ಯತ್ನ ಎಂದು ಖಂಡಿಸಿವೆ.
‘ಆಡಳಿತಶಾಹಿಗಳಿಂದ ಹೋರಾಟಗಾರರಿಗೆ ಅಂಕುಶ ಹಾಕುವ ಕೆಲಸ. ಇದನ್ನು ಖಂಡಿಸಲೇಬೇಕು’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.