
ಗುಡಿಬಂಡೆ: ರಾಮಪಟ್ಟಣ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಸಿಗ್ಬತ್ತುಲ್ಲಾ ಅವರ ನೇತೃತ್ವದಲ್ಲಿ ಮನೆಗಳ ಮಾಲೀಕರು ಮತ್ತು ಅಧಿಕಾರಿಗಳ ಸಭೆ ಗುರುವಾರ ನಡೆಯಿತು.
ತಾವು ವಾಸಿಸುವ ಸ್ಥಳದಲ್ಲಿ ಉತ್ತಮ ರಸ್ತೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ನಷ್ಟ ಪರಿಹಾರ ಕೊಟ್ಟಲ್ಲಿ ರಸ್ತೆ ಅಭಿವೃದ್ಧಿಗೆ ತಮ್ಮ ಅಭ್ಯಂತರವಿಲ್ಲ ಎಂದು ಮನೆಗಳ ಮಾಲೀಕರು ಸಭೆಯಲ್ಲಿ ತಿಳಿಸಿದರು.
ತಹಶೀಲ್ದಾರ್ ಸಿಗ್ಬತ್ತುಲ್ಲಾ, ಮಾತನಾಡಿ, ‘ರಸ್ತೆ ಅಗಲೀಕರಣವಾಗಬೇಕು ಎಂಬ ಸರ್ಕಾರದ ಆದೇಶದ ಪ್ರಕಾರ ರಸ್ತೆ ಮತ್ತು ಮನೆಗಳನ್ನು ಪರಿಶೀಲಿಸಲಾಗಿದೆ. ರಾಮಪಟ್ಟಣದಲ್ಲಿ 20*20 ಅಡಿಗಳಷ್ಟು ಅಗಲದ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಕಾಮಗಾರಿಯಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ರಸ್ತೆ ಅಭಿವೃದ್ಧಿಯಿಂದ ನಾವು ವಾಸಿಸುತ್ತಿರುವ ಮನೆಗಳನ್ನು ನಾವು ಕಳೆದುಕೊಳ್ಳುತ್ತೇವೆ. ಇದಕ್ಕಾಗಿ ಸರ್ಕಾರ ನಮಗೆ ನಷ್ಟ ಪರಿಹಾರ ಕೊಡಬೇಕು. ಅಲ್ಲದೆ, ನಿವೇಶನಗಳನ್ನು ಮಂಜೂರು ಮಾಡಬೇಕು ಎಂದು ಮನೆಗಳ ಮಾಲೀಕರು ಮನವಿ ಮಾಡಿದರು.
ಮಸೀದಿ ಬಳಿ ಇರುವ ಚರಂಡಿ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹1 ಕೋಟಿ ಮಂಜೂರು ಆಗಿದೆ. ಆರು ತಿಂಗಳಿನೊಳಗಾಗಿ ಆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಲೋಕಪಯೋಗಿ ಇಲಾಖೆ ಎಂಜಿನಿಯರ್ ಪೂಜಪ್ಪ ಭರವಸೆ ನೀಡಿದರು.
ಈ ವೇಳೆ ತಹಶೀಲ್ದಾರ್ ಸಿಗ್ಬತ್ತುಲ್ಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಬಾ ಶರೀನಾ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪೂಜಪ್ಪ, ಕೆಇಬಿ ವಿಶ್ವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.