ADVERTISEMENT

ಸುಲ್ತಾನ್ ಪೇಟೆ ಮಾರ್ಗ; ಪ್ರವಾಸಿಗರ ಸುರಕ್ಷೆ ಪ್ರಶ್ನೆ

ನಂದಿಗಿರಿಧಾಮಕ್ಕೆ ವಾರಾಂತ್ಯದ ದಿನಗಳಲ್ಲಿ ಬೆಳಿಗ್ಗೆ 4ಕ್ಕೆ ಟ್ರಕ್ಕಿಂಗ್‌ಗೆ ಮುಂದಾಗುತ್ತಿರುವ ಪ್ರವಾಸಿಗರು

ಡಿ.ಎಂ.ಕುರ್ಕೆ ಪ್ರಶಾಂತ
Published 28 ಅಕ್ಟೋಬರ್ 2025, 3:03 IST
Last Updated 28 ಅಕ್ಟೋಬರ್ 2025, 3:03 IST

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದ ಬೇಸಿಗೆ ಅರಮನೆಯ ಮೇಲೆ ಪಾತಕಿ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆಯಲಾಗಿದೆ. ಕಿಡಿಗೇಡಿಗಳ ಈ ಕೃತ್ಯ ತೀವ್ರ ಚರ್ಚೆಗೆ ಕಾರಣವಾಗಿದೆ. 

ಮತ್ತೊಂದು ಕಡೆ ಗಿರಿಧಾಮದಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿ ಮತ್ತು ಸುಲ್ತಾನ್ ಪೇಟೆಯ ಜನರಲ್ಲಿ ಈಗ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷೆಯ ಪ್ರಶ್ನೆಯೂ ಮೂಡಿದೆ.

ಗಿರಿಧಾಮಕ್ಕೆ ಸುಲ್ತಾನ್‌ಪೇಟೆ ಮಾರ್ಗವಾಗಿ ಕಾಲ್ನಡಿಯಲ್ಲಿ ಸಾಗುವ ಹಾದಿ ಇದೆ. ಈ ಹಾದಿಯಲ್ಲಿ ಸಾಗುವ ಪ್ರವಾಸಿಗರ ಸುರಕ್ಷತೆ ವಿಚಾರದ ಚರ್ಚೆಯು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ನಂದಿಗಿರಿಧಾಮಕ್ಕೆ ಟ್ರಕ್ಕಿಂಗ್ ನಡೆಸುವವರು ಸುಲ್ತಾನ್ ಪೇಟೆ ಮಾರ್ಗದಲ್ಲಿರುವ ಮೆಟ್ಟಿಲುಗಳ ಮೂಲಕ ಗಿರಿಧಾಮ ತಲುಪುವರು.

ADVERTISEMENT

ಈ ರಸ್ತೆಯು ಸುಮಾರು ಎರಡೂವರೆ ಕಿ.ಮೀ ದಾರಿಯಾಗಿದೆ. 1,776 ಮೆಟ್ಟಿಲುಗಳು ಇವೆ. ಇದು ಟಿಪ್ಪು ಬೇಸಿಗೆ ಅರಮನೆಯ ಹಿಂಭಾಗದ ಮೂಲಕ ಗಿರಿಧಾಮ ತಲುಪುತ್ತದೆ. ಕಾಡಿನ ಈ ಹಾದಿಯಲ್ಲಿ ವೀರಭದ್ರ ದೇಗುಲವೂ ಸಿಗುತ್ತದೆ. ಟಿಪ್ಪು ಬೇಸಿಗೆ ಅರಮನೆಯ ನಂತರದ ಪ್ರದೇಶವು ತೋಟಗಾರಿಕಾ ಇಲಾಖೆಯ ಅಧೀನದಲ್ಲಿ ಇದ್ದರೆ, ಸುಲ್ತಾನ್ ಪೇಟೆಯಿಂದ ಗಿರಿಧಾಮಕ್ಕೆ ಬರುವ ಹಾದಿಯು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.

ವಾರಾಂತ್ಯದ ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿ ಮತ್ತು ಸ್ಥಳೀಯರ ಪ್ರಕಾರ, ಎರಡರಿಂದ ಮೂರು ಸಾವಿರ ಜನರು ಸುಲ್ತಾನ್‌ಪೇಟೆ ಹಾದಿಯಲ್ಲಿ ಗಿರಿಧಾಮ ಏರುವರು. 

ಬೆಳಿಗ್ಗೆ 3ರ ವೇಳೆಗೆ ಕೆಲವರು ಈ ಹಾದಿಯಲ್ಲಿ ಟ್ರಕ್ಕಿಂಗ್ ಆರಂಭಿಸುವರು.  ಕತ್ತಲೆಯಲ್ಲಿಯೇ ಇಲ್ಲಿ ಟ್ರಕ್ಕಿಂಗ್ ನಡೆಸುವರು. ಮುಖ್ಯದ್ವಾರದಲ್ಲಿ ಪ್ರವಾಸಿಗರು ಗಿರಿಧಾಮ ಪ್ರವೇಶಿಸುವ ಮುನ್ನವೇ ಸುಲ್ತಾನ್‌ಪೇಟೆ ಹಾದಿಯಲ್ಲಿ ಪ್ರವಾಸಿಗರು ಗಿರಿಧಾಮ ಏರುವರು. 

ಹೀಗೆ ಬೆಳ್ಳಂ ಬೆಳಿಗ್ಗೆಯೇ ಟ್ರಕ್ಕಿಂಗ್ ನಡೆಸುವುದು ಸುರಕ್ಷೆಯ ದೃಷ್ಟಿಯಿಂದ ಉತ್ತಮವಲ್ಲ ಎಂದು ಖುದ್ದು ಅಧಿಕಾರಿಗಳೇ ತಿಳಿಸುವರು. ಆದರೆ ಇಲ್ಲಿ ಯಾವ ಸಿಬ್ಬಂದಿ ನೇಮಿಸಬೇಕು ಎನ್ನುವ ವಿಚಾರ ಜಿಜ್ಞಾಸೆಗೆ ಒಳಗಾಗುವ ಕಾರಣ, ಅಧಿಕಾರಿಗಳು ಮೌನವಹಿಸಿದ್ದಾರೆ.

ಜಿಲ್ಲಾಡಳಿತ ಗಮನವಹಿಸಬೇಕು: ಸುಲ್ತಾನ್‌ಪೇಟೆ ಮಾರ್ಗದಲ್ಲಿ ಬಂದವರೇ ಟಿಪ್ಪು ಬೇಸಿಗೆ ಅರಮನೆ ಮೇಲೆ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದಿರುವ ಸಾಧ್ಯತೆ ಇದೆ. ಈ ದಾರಿಯು ಅರಣ್ಯ ಪ್ರದೇಶಕ್ಕೆ ಸೇರುತ್ತದೆ. ಜಿಲ್ಲಾಡಳಿತ ಇಲ್ಲಿ ಭದ್ರತೆ ಕೈಗೊಳ್ಳುವ ಬಗ್ಗೆ ಆಲೋಚಿಸಬೇಕು ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿ ತಿಳಿಸುವರು.

‘ಯಾರಾದರೂ ಟಿಪ್ಪು ಬೇಸಿಗೆ ಅರಮನೆಗೆ ಹಾನಿ ಮಾಡುವ ಸಾಧ್ಯತೆಯೂ ಇರುತ್ತದೆ. ಈ ಎಲ್ಲ ದೃಷ್ಟಿಯಿಂದ ಸುಲ್ತಾನ್ ಪೇಟೆಯ ಹಾದಿಯ ಬಗ್ಗೆ ಎಚ್ಚರವಹಿಸಬೇಕು’ ಎಂದರು.

ಮುಖ್ಯ ಪ್ರವೇಶ ದ್ವಾರದಲ್ಲಿ ಪ್ರವೇಶಕ್ಕೆ ಸಮಯ ನಿಗದಿಗೊಳಿಸಿರುವ ರೀತಿಯಲ್ಲಿಯೇ ಸುಲ್ತಾನ್ ಪೇಟೆ ದಾರಿಯಲ್ಲಿಯೂ ಪ್ರವೇಶಕ್ಕೆ ಸಮಯ ನಿಗದಿಗೊಳಿಸಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹ.

ಗಾಂಧಿ ಅವರಿಗೆ ಕಾದಿದ್ದ ಮಿರ್ಜಾ ಇಸ್ಮಾಯಿಲ್: 1936ರ ಮೇ ತಿಂಗಳಲ್ಲಿ ಮದರಾಸ್‌ ಪ್ರವಾಸದಲ್ಲಿದ್ದ ಗಾಂಧೀಜಿ ಅವರಿಗೆ ರಕ್ತದ ಒತ್ತಡ ಹೆಚ್ಚಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ವೇಳೆ ಕೂಡ ಮಹಾತ್ಮರ ವಿಶ್ರಾಂತಿಗೆ ನಂದಿ ಗಿರಿಧಾಮವೇ ಸೂಕ್ತ ಎಂದು ಅವರ ಪರಿವಾರದವರು ನಿರ್ಧರಿಸಿದರು. ಗಾಂಧೀಜಿ ಅವರು 1936ರ ಮೇ 10 ರಂದು ಬೆಂಗಳೂರಿಗೆ ಬಂದು, ಕುಮಾರಕೃಪಾ ಭವನದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಬಳಿಕ ಎರಡನೇ ಬಾರಿಗೆ ನಂದಿ ಬೆಟ್ಟದತ್ತ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾರೆ.

ವೇಳೆ ಗಾಂಧೀಜಿ ಅವರನ್ನು ಡೋಲಿ ಮೂಲಕ ಬೆಟ್ಟದ ಮೇಲೆ ಕರೆದೊಯ್ಯಲು ಸುಲ್ತಾನ್ ಪೇಟೆಯಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸೇರಿದಂತೆ ಅನೇಕ ಗಣ್ಯರು ಕಾಯುತ್ತಿರುತ್ತಾರೆ. ಆದರೆ ಗಾಂಧೀಜಿ ಅವರು ಬೆಟ್ಟದ ದಕ್ಷಿಣ ದಿಕ್ಕಿನಲ್ಲಿ ಕುಡುವತಿ ಗ್ರಾಮದ ಬಳಿ ಇದ್ದ ಮಣ್ಣಿನ ರಸ್ತೆ ಮೂಲಕ ಅನಾರೋಗ್ಯದ ನಡುವೆಯೇ ಕಾಲ್ನಡಿಗೆಯಲ್ಲೇ 1,478 ಮೀಟರ್ ಎತ್ತರದ ಬೆಟ್ಟ ಏರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.