
ಶಿಡ್ಲಘಟ್ಟ: ತಾಲ್ಲೂಕಿನ ಸಾದಲಿ ಹೋಬಳಿಯ ಎಸ್. ದೇವಗಾನಹಳ್ಳಿ ಗ್ರಾಮದಲ್ಲಿ ಚೋಳರ ರಾಜ ಒಂದನೇ ಕುಲೋತ್ತುಂಗನ ಕಾಲದ ಶಾಸನ ಪತ್ತೆಯಾಗಿದೆ.
ಸಾದಲಿಯ ಈಶ್ವರ ದೇವಾಲಯಕ್ಕೆ ಚೋಳರ ರಾಜ ದಾನ ನೀಡಿರುವ ಕುರಿತು ಈ ಶಾಸನದಲ್ಲಿ ತಮಿಳಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಶಾಸನ ತಜ್ಞ ಕೆ.ಧನಪಾಲ್, ಅಪ್ಪೇಗೌಡನಹಳ್ಳಿ ಎ.ಎಂ. ತ್ಯಾಗರಾಜ್, ಕೆ.ಆರ್. ನರಸಿಂಹನ್ ತಂಡ ತಿಳಿಸಿದೆ.
ಕುಲೋತ್ತುಂಗ ಚೋಳ ರಾಜ್ಯದ ಚಕ್ರವರ್ತಿ ಆಗಿದ್ದಾಗ್ಯೂ, ಮೂಲದಲ್ಲಿ ಆತ ಪ್ರಖ್ಯಾತ ಕನ್ನಡ ಅರಸ ಇಮ್ಮಡಿ ಪುಲಿಕೇಶಿಯ ವಂಶಸ್ಥ. ಚಾಲುಕ್ಯರ ಪುಲಿಕೇಶಿಯು ತನ್ನ ಸಹೋದರ ಕುಬ್ಜ ವಿಷ್ಣುವರ್ಧನನಿಗೆ ವೆಂಗಿ ರಾಜ್ಯವನ್ನು ಗೆದ್ದುಕೊಟ್ಟಿರುತ್ತಾನೆ. ಆ ವೆಂಗಿ ಚಾಲುಕ್ಯ ವಂಶದ ರಾಜ ನರೇಂದ್ರನ ಮಗನೇ ಈ ಕುಲೋತುಂಗ. ಚೋಳ ವಂಶದ ರಾಜೇಂದ್ರ ಚೋಳನ ಮಗಳ ಮಗನಾದ್ದರಿಂದ ಇವನಿಗೆ ಚೋಳ ಸಿಂಹಾಸನ ಅಲಂಕರಿಸುವ ಅವಕಾಶ ಸಿಗುತ್ತದೆ.
ಹೊಯ್ಸಳರ ವಿಷ್ಣುವರ್ಧನ ಚೋಳರನ್ನು ಕನ್ನಡನಾಡಿನಿಂದ ಹೊರದಬ್ಬಿದ ನಂತರವೂ ಕುಲೋತ್ತುಂಗ ಮತ್ತು ಆತನ ಮಗ ವಿಕ್ರಮಚೋಳನ ಶಾಸನಗಳು ಶಿಡ್ಲಘಟ್ಟ ತಾಲ್ಲೂಕಿನ ನಂದನವನ, ಚಿಲಕಲನೇರ್ಪು ಮತ್ತು ಸುಗಟೂರುಗಳಲ್ಲಿ ಸಿಕ್ಕಿವೆ. ಎಸ್.ದೇವಗಾನಹಳ್ಳಿ ಶಾಸನವೂ ಅದೇ ರೀತಿಯದ್ದು. ಸ್ಥಳೀಯರು ಅದನ್ನು ಸಂರಕ್ಷಿಸಬೇಕು ಎಂದು ಶಾಸನತಜ್ಞ ಡಿ.ಎನ್.ಸುದರ್ಶನರೆಡ್ಡಿ ಹೇಳುತ್ತಾರೆ.
ಗ್ರಾನೈಟ್ ಶಿಲಾಫಲಕದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರನ್ನು ಕೆತ್ತಿ, ಸಾಮಾನ್ಯವಾಗಿ ದಾನ ಶಾಸನಗಳಲ್ಲಿ ಕಂಡುಬರುವ ಹಸು-ಕರುವಿನ ಶಿಲ್ಪವಿರುವ, ತಮಿಳು-ಗ್ರಂಥ ಲಿಪಿಯ ಶಾಸನವು ಮಣ್ಣಿನಲ್ಲಿ ಮುಚ್ಚಿಹೋಗಿತ್ತು. ಇದನ್ನು ಗಮನಿಸಿದ ಶಾಸನತಜ್ಞರ ತಂಡ ಸಾದಲಿಯ ಶಿಕ್ಷಕ ನಾಗೇಶ್ ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಸನವನ್ನು ಹೊರತೆಗೆದು ಅಧ್ಯಯನ ಮಾಡಿದ್ದಾರೆ.
ಶಾಸನದ ಸಾರಾಂಶ: ಈ ಶಾಸನವು ಚೋಳ ರಾಜನಾದ ಒಂದನೇ ಕುಲೋತ್ತುಂಗ ಚೋಳನ 27ನೇ ಆಡಳಿತದ ಕಾಲದ್ದಾಗಿದೆ. ಅಂದರೆ ಕ್ರಿ.ಶ 1097ರಲ್ಲಿ ಪರದೇಸಿ ವ್ಯಾಪಾರ ಸಂಘದ ಪ್ರಮುಖನಾದ ಕೆಂಜಕೆತ್ತಶೆಟ್ಟಿ ಎಂಬುವರು ನಿಗಿರಿಲಿ ಚೋಳಮಂಡಲಕ್ಕೆ ಸೇರಿದ ಇರುಮುಡಿ ನಾಡಿನ ಹಿರಿಯ ಸಾದಲಿಯಲ್ಲಿ ಒಂದು ಕೆರೆ ಕಟ್ಟಿಸಿ, ಈ ಕೆರೆಯ ಪೂರ್ವಕ್ಕಿರುವ ಗದ್ದೆ ಜಮೀನನ್ನು ಇರುಮಡಿನಾಡಿನ ನಿಗರಿಲಿಚೋಳ ಮಂಡಲದ ಹಿರಿಯ ಸಾದಲಿ ಗ್ರಾಮದ ಈಶ್ವರ ದೇವಾಲಯಕ್ಕೆ ಹಾಗೂ ಹದಿನಾರು ಜನ ಬ್ರಾಹ್ಮಣರಿಗೆ ದಾನವಾಗಿ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಒಟ್ಟು 31 ಸಾಲು ಹೊದಿರುವ ಈ ಶಾಸನದ ಕಲ್ಲು ಮಣ್ಣಿನಲ್ಲಿ ಮುಚ್ಚಿಹೋಗಿ ಅವಸಾನದ ಅಂಚಿನಲ್ಲಿತ್ತು. ಇದನ್ನು ಹೊರತೆಗೆದು ಅಧ್ಯಯನ ಮಾಡಲು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ. ಓಬಳಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಡಿ.ವಿ.ರಮೇಶ್, ಗ್ರಾಮಸ್ಥರಾದ ನರಸಿಂಹಪ್ಪ, ಗಂಗರಾಜ, ಹಂಸದ್, ಸಂಜಯ್, ಸೀನಪ್ಪ, ವೆಂಕಟರಮಣಪ್ಪ, ಸಾದಲಿ ನಾಗೇಶ್, ಸಂಶೋಧನಾ ವಿದ್ಯಾರ್ಥಿ ಶ್ರೀನಿವಾಸ್ ಸಹಕಾರ ನೀಡಿರುತ್ತಾರೆ. ಅಲ್ಲದೆ ಶಾಸನದ ಸಾರಾಂಶ ಓದಲು ಕೃಷ್ಣಗಿರಿಯ ಗೋವಿಂದರಾಜ್ ಸಹಕರಿಸಿದ್ದಾರೆ ಎಂದು ಶಾಸನ ತಜ್ಞ ಕೆ.ಧನಪಾಲ್
ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.