
ಚಿಕ್ಕಬಳ್ಳಾಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಸೋಮವಾರ ಪ್ರತಿಭಟಿಸಿದರು.
ಶಿಡ್ಲಘಟ್ಟ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. 11 ಜನರ ಸಾವಿಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಷ್ಠೆಗಾಗಿ ಆರ್‌ಸಿಬಿ ಅಭಿಮಾನಿಗಳ ಬಲಿಕೊಟ್ಟ ಕಾಂಗ್ರೆಸ್ ಸರ್ಕಾರ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಜನರ ರಕ್ಷಣೆ ಸರ್ಕಾರದ ಜವಾಬ್ದಾರಿ ಆದರೆ ಆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿಭಾಯಿಸಲಿಲ್ಲ. ನಾನು ಇದಿದ್ದು ವಿಧಾನಸೌಧ ಮುಂಭಾಗ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಏನಾಯಿತೊ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಮುಖ್ಯಮಂತ್ರಿ ಅವರಿಗೆ ಆಡಳಿತದ ಅನುಭವವಿದೆ. ಅವರು ರಾಜ್ಯಕ್ಕೆ ಮುಖ್ಯಮಂತ್ರಿಯೊ ಅಥವಾ ವಿಧಾನಸೌಧಕ್ಕೆ ಮಾತ್ರ ಮುಖ್ಯಮಂತ್ರಿಯೊ ಎಂದು ಟೀಕಿಸಿದರು.
ನಾವು ಕಾಲ್ತುಳಿತದ ಜವಾಬ್ದಾರಿ ಹೊರುತ್ತೇವೆ ಎನ್ನುವ ಮಾತನ್ನೇ ಆಡಲಿಲ್ಲ. ನಾವು ಈ ವಿಚಾರದಲ್ಲಿ ರಾಜಕೀಯ ಮಾತನಾಡುತ್ತಿಲ್ಲ. ಆದರೆ ಮೃತರ ಕುಟುಂಬಗಳಿಗೆ, ಆ ತಂದೆ ತಾಯಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದರು.
ಚೆನ್ನೈ, ಕೋಲ್ಕತ್ತಾ, ದೆಹಲಿ ತಂಡಗಳು ಗೆದ್ದಾಗಲೂ ಆ ರಾಜ್ಯಗಳಲ್ಲಿ ಆ ತಂಡಗಳು ವಿಜಯೋತ್ಸವ ನಡೆಸಿವೆ. ಮೆರವಣಿಗೆ ಮಾಡಿದೆ. ಆದರೆ ಆ ಎಲ್ಲಿಯೂ ಇಂತಹ ದುರ್ಘಟನೆ ಆಗಿಲ್ಲ. ಪೊಲೀಸ್ ಅಧಿಕಾರಿಗಳು ಮೆರವಣಿಗೆಗೆ ಅವಕಾಶ ಕೊಡಬೇಡಿ. ಸಿದ್ಧತೆ ಮಾಡಿಕೊಂಡಿಲ್ಲ ಎಂದು ಹೇಳಿದರೂ ಕಾರ್ಯಕ್ರಮ ಆಯೋಜಿಸಲಾಯಿತು. ಅಮಾಯಕರಿಗೆ ತೊಂದರೆ ಆಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಪತ್ರ ಸಹ ಬರೆದಿದ್ದಾರೆ. ಆದರೆ ಯಾವ ಬೃಹಸ್ಪತಿಗಳ ಒತ್ತಡದಿಂದ ಈ ಕಾರ್ಯಕ್ರಮ ಮಾಡಿದ್ದಾರೆ. ಕ್ರೀಡಾಂಗಣಕ್ಕೆ ಜನರನ್ನು ಕರೆದು ಅಲ್ಲಿ ಗೇಟ್ ಬಂದ್ ಮಾಡುತ್ತೀರಿ, ಅಷ್ಟು ಜನರು ಒಂದೇ ಗೇಟ್‌ನಲ್ಲಿ ಕ್ರೀಡಾಂಗಣ ಪ್ರವೇಶಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆರ್‌ಸಿಬಿ ವಿಜಯೋತ್ಸವದ ಕ್ರೆಡಿಟ್ ತೆಗೆದುಕೊಳ್ಳಲು ಪೈಪೋಟಿ ನಡೆಸಿದರು. ಆಟಗಾರರೇ ಹಿಂದೆ ಇದ್ದರು ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರ ಗೌಡ, ಮಾಜಿ ಅಧ್ಯಕ್ಷ ಟಿ.ರಾಮಲಿಂಗಪ್ಪ, ಮುಖಂಡರಾದ ವೇಣುಗೋಪಾಲ್, ಸುರೇಂದ್ರಗೌಡ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
‘ಗೃಹ ಇಲಾಖೆ ಯಾರ ಬಳಿ ಇದೆ’
ಈ ಎರಡು ವರ್ಷದಲ್ಲಿ ಕಾಂಗ್ರೆಸ್ ಯಾವುದೇ ವಿಷಯವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲಿಲ್ಲ. ರಾಜ್ಯದಲ್ಲಿ ಹತ್ಯೆಗಳು ಅತ್ಯಾಚಾರಗಳು ಹೆಚ್ಚಿವೆ. ಗೃಹ ಇಲಾಖೆ ಇದೆಯೊ ಇಲ್ಲವೊ ಗೊತ್ತಿಲ್ಲ ಎಂದು ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದಿನಿಂದಲೂ ನಾನು ಪರಮೇಶ್ವರ ಅವರನ್ನು ನೋಡಿದ್ದೇನೆ. ಆದರೆ ಈಗ ಗೃಹ ಇಲಾಖೆ ಅವರ ಕೈಯಲ್ಲಿ ಇಲ್ಲ. ಬೇರೆ ಯಾರ ಕೈಯಲ್ಲೊ ಇದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.