
ಆಲ್ದೂರು: ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ಮೌಢ್ಯ ಆಚರಣೆ ವಿರೋಧಿ ಕಾರ್ಯಕ್ರಮವು ಪಟ್ಟಣ ಸಮೀಪದ ಬಿರಂಜಿ ಹೊಳೆಯ ಪಕ್ಕದ ಸ್ಮಶಾನ ಭೂಮಿಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ರಾಮಮ್ಮ ಎಂಬುವರ ಸಮಾಧಿಗೆ ಗೌರವ ಸಮರ್ಪಣೆ ಮಾಡಿ ಬಳಿಕ ಸ್ಮಶಾನದಲ್ಲಿ ಆಹಾರ ತಯಾರಿಸಿ ಸಾಮೂಹಿಕ ಸಹಭೋಜನ ಹಮ್ಮಿಕೊಳ್ಳಲಾಗಿತ್ತು.
ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ದೌರ್ಜನ್ಯ ವಿರೋಧಿ ಸಮಿತಿ ಸದಸ್ಯ ಹುಣಸೆಮಕ್ಕಿ ಲಕ್ಷ್ಮಣ್, ‘ಸ್ಮಶಾನಭೂಮಿಯಲ್ಲಿ ನಕಾರಾತ್ಮಕ ಶಕ್ತಿಗಳು, ಭೂತಪ್ರೇತ ಶಕ್ತಿಗಳು ಓಡಾಡುತ್ತವೆ ಎಂದು ಬಿಂಬಿಸಲಾಗುತ್ತಿದೆ. ಈ ಮೂಲಕ ಮೌಢ್ಯ ಆಚರಣೆಗಳನ್ನು ಸಮಾಜ ನಂಬುವಂತೆ ಮಾಡಿ ಮುಗ್ಧ ಅಮಾಯಕರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಲಾಗುತ್ತಿದೆ. ಪ್ರತಿಯೊಂದಕ್ಕೂ ಕಥೆಗಳನ್ನು ಕಟ್ಟಿ ಎಲ್ಲದಕ್ಕೂ ಪರಿಹಾರ ಒದಗಿಸುತ್ತೇವೆ ಎಂದು ಹಣ ಸುಲಿಗೆ ಮಾಡುವ ವರ್ಗದವರು ಹೆಚ್ಚಾಗಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು’ ಎಂದರು.
ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ್, ‘ಇಂದು ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾಗಿದೆ. ಬಾಬಾ ಸಾಹೇಬರು ಎಂದಿಗೂ ಮೌಢ್ಯ ಆಚರಣೆಯನ್ನು ಬೆಂಬಲಿಸಲಿಲ್ಲ. ಪ್ರಸ್ತುತ ಸಮಾಜದಲ್ಲಿ ದಲಿತರನ್ನು ಮುಖ್ಯವಾಹಿನಿಗೆ ಬರದಂತೆ, ದೇವರು ಮತ್ತು ದೆವ್ವಗಳ ನಂಬಿಕೆಯನ್ನು ಹುಟ್ಟಿಸಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ’ ಎಂದರು.
‘ಸ್ಮಶಾನದಲ್ಲಿ ಯಾವುದೇ ಆಚರಣೆಗಳನ್ನು, ಸಾಮೂಹಿಕ ಸಹಭೋಜನ ಹಮ್ಮಿಕೊಳ್ಳಬಾರದು ಎಂಬ ಮೂಢನಂಬಿಕೆಗಳನ್ನು ಜನರಲ್ಲಿ ಹಬ್ಬಿಸಲಾಗುತ್ತಿದೆ. ಇದು ಬ್ರಾಹ್ಮಣರು ಹುಟ್ಟು ಹಾಕಿರುವ ಕಂದಾಚಾರಗಳಾಗಿದ್ದು, ಇವುಗಳ ಸರಪಳಿಗಳನ್ನು ಮುರಿಯುವ ಸಂಬಂಧ ದಿ.ರಾಮಮ್ಮ ಅವರನ್ನು ಸಮಾಧಿ ಮಾಡಿರುವ ಸ್ಮಶಾನ ಭೂಮಿಯಲ್ಲಿ ಅಡುಗೆ ಮಾಡಿ ಎಲ್ಲರೂ ಸೇವಿಸಿ ಸ್ಮಶಾನಭೂಮಿಯೂ ಭೂಮಿಯ ಒಂದು ಭಾಗ ಎಂಬುದನ್ನು ತಿಳಿಸಿದ್ದೇವೆ’ ಎಂದರು.
‘ಸಮಾಜದಲ್ಲಿ ಮೇಲ್ವರ್ಗದವರು ರೂಢಿಸಿಕೊಂಡು ಬಂದಿದ್ದ ಮತ್ತು ಮೂಢನಂಬಿಕೆಯ ಆಚರಣೆಗಳಿಂದ ದಲಿತರನ್ನು, ಅಮಾಯಕರನ್ನು ಶೋಷಿಸುತ್ತಾ ಬಂದಿದ್ದ ಮನುವಾದಿಗಳಿಗೆ ಇಂಥ ಜಾಗೃತಿ ಕಾರ್ಯಕ್ರಮಗಳ ಮೂಲಕ ತಿರುಗೇಟು ನೀಡುವಂಥ ಅರಿವು ಕಾರ್ಯಕ್ರಮಗಳನ್ನು ಹೆಚ್ಚು ನಡೆಸಬೇಕು’ ಎಂದರು.
ಕಾರ್ಯಕ್ರಮದಲ್ಲಿ ಭೀಮ ಗೀತೆ ಗಾಯನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜು ಎಚ್., ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದ ರಾಮಮ್ಮ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಅರ್ಪಿಸಿದರು.
ಅಂಬೇಡ್ಕರ್ ಹೋರಾಟ ವೇದಿಕೆ ಗೌರವಾಧ್ಯಕ್ಷ ಹೊನ್ನಪ್ಪ ಯಲಗುಡಿಗೆ, ಡಿಎಸ್ಎಸ್ ಮುಖಂಡ ಯೋಗೇಶ್ ತುಡುಕೂರು, ಉಮೇಶ್ ದೇವರಹಳ್ಳಿ, ಅಶೋಕ್ ರಾಜರತ್ನಂ, ಪಂಚಾಯಿತಿ ಸದಸ್ಯರಾದ ಲಕ್ಷ್ಮಿ, ಮನು, ವಸಂತ್, ಪುಟ್ಟರಾಜು, ಹೆಡದಾಳು ಕುಮಾರ್, ಸತ್ತಿಹಳ್ಳಿ ಯೋಗೇಶ್, ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.