ADVERTISEMENT

ಕಳಸ: ಅತಿವೃಷ್ಟಿ ಸಂತ್ರಸ್ತರ ನಿವೇಶನ ಒತ್ತುವರಿ ತೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:29 IST
Last Updated 12 ನವೆಂಬರ್ 2025, 4:29 IST
ಕಳಸ ತಾಲ್ಲೂಕಿನ ಇಡಕಿಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ಮೀಸಲಿಟ್ಟಿದ್ದ ಭೂಮಿ ಒತ್ತುವರಿ ಮಾಡಿರುವುದನ್ನು ಅಧಿಕಾರಿಗಳು ಪರಿಶೀಲನೆ ಮಾಡಿದರು
ಕಳಸ ತಾಲ್ಲೂಕಿನ ಇಡಕಿಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ಮೀಸಲಿಟ್ಟಿದ್ದ ಭೂಮಿ ಒತ್ತುವರಿ ಮಾಡಿರುವುದನ್ನು ಅಧಿಕಾರಿಗಳು ಪರಿಶೀಲನೆ ಮಾಡಿದರು   

ಕಳಸ: ಚನ್ನಡಲು ಗ್ರಾಮದ ಅತಿವೃಷ್ಟಿ ಸಂತ್ರಸ್ತರಿಗೆಂದು ಇಡಕಿಣಿ ಗ್ರಾಮದಲ್ಲಿ ಗುರುತಿಸಲಾಗಿದ್ದ ಭೂ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳು ಒತ್ತುವರಿದಾರರಿಗೆ ಸೂಚಿಸಿದ್ದಾರೆ.

ಚನ್ನಡಲು ಗ್ರಾಮದ 2019ರ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ಇಡಕಿಣಿಯ ಓಡಿನಕುಡಿಗೆಯ ಸರ್ವೆ ನಂ.129ರಲ್ಲಿ 2.20 ಎಕರೆ ಭೂಮಿ ಮಂಜೂರು ಆಗಿತ್ತು. ಕಳೆದ ವರ್ಷ ಅವರಿಗೆ ಹಕ್ಕುಪತ್ರ ನೀಡಿದ ನಂತರ, ಅಲ್ಲಿ 16 ಮನೆಗಳ ಅಡಿಪಾಯ ಕೂಡ ಹಾಕಲಾಗಿದೆ. ತಾಂತ್ರಿಕ ಕಾರಣದಿಂದ ಮನೆಯ ಮುಂದಿನ ಹಂತದ ಬಿಲ್ ಪಾವತಿ ಆಗಿಲ್ಲ. ಇದರಿಂದ ಮನೆ ಕೆಲಸ ಸ್ಥಗಿತ ಆಗಿದೆ.

‌ಈ ನಿವೇಶನಗಳಿಗೆ ಹೊಂದಿಕೊಂಡಂತ ಜಾಗವನ್ನು ಒತ್ತುವರಿ ಮಾಡಿದ ಬಗ್ಗೆ ಅತಿವೃಷ್ಟಿ ಸಂತ್ರಸ್ತ ಚನ್ನಡಲು ಅವಿನಾಶ್ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದರು. ಸೋಮವಾರ (ನ. 10) ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಅವರು, ಭೂ ಒತ್ತುವರಿ ಮಾಡಿದ್ದನ್ನು ಕಂಡು ಒಂದು ವಾರದೊಳಗೆ ಒತ್ತುವರಿ ಖುಲ್ಲಾ ಮಾಡುವಂತೆ ಸೂಚನೆ ನೀಡಿದರು.

ADVERTISEMENT

ಈ ಪ್ರದೇಶದಲ್ಲಿ ಗಡಿ ಗುರುತು ಮಾಡಿದ್ದ ಕಲ್ಲನ್ನು ಖಾಸಗಿಯವರು ಕಿತ್ತಿದ್ದಾರೆ. ಮತ್ತೊಮ್ಮೆ ಇಲ್ಲಿ ಸರ್ವೆ ಮಾಡಿ ಗಡಿ ಗುರುತು ಮಾಡಬೇಕು ಎಂದು ಅವಿನಾಶ್ ಆಗ್ರಹಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪಿ ಇನ್ನೊಮ್ಮೆ ಸರ್ವೆ ಮಾಡಿಸಿ, ಗಡಿಯ ಉದ್ದಕ್ಕೂ ಕಂದಕ ತೊಡಿಸುವ ಬಗ್ಗೆ ಭರವಸೆ ನೀಡಿದರು. ಇಡಕಿಣಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಕೂಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.