
ಕಡೂರು: ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ಗೌಡ ಅವರ ಹತ್ಯೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಸಖರಾಯಪಟ್ಟಣದಲ್ಲಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಿ, ಹತ್ಯೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಶುಕ್ರವಾರ ರಾತ್ರಿ ಹಲ್ಲೆಗೀಡಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಗಣೇಶಗೌಡ (38) ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶನಿವಾರ ಪೊಲೀಸ್ ಭದ್ರತೆಯಲ್ಲಿ ಶವವನ್ನು ಆಂಬುಲೆನ್ಸ್ ಮೂಲಕ ಸಖರಾಯಪಟ್ಟಣಕ್ಕೆ ತೆಗೆದುಕೊಂಡು ಬಂದಾಗ ಶವವನ್ನು ಇಳಿಸಲು ಬಿಡದೆ, ರಸ್ತೆ ಮಧ್ಯೆ ಕುಳಿತ ಎತ್ತಿನಮನೆ ಸಚಿನ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ತಂಡ ಬಜರಂಗದಳ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಹತ್ಯೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದರು.
ಚಿಕ್ಕಮಗಳೂರಿನಿಂದ ಬಂದ ಶಾಸಕ ಎಚ್.ಡಿ. ತಮ್ಮಯ್ಯ, ಮುಖಂಡರಾದ ಬಿ.ಎಲ್. ಶಂಕರ್ ಮತ್ತು ಮಹಡಿಮನೆ ಸತೀಶ್ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ, ‘ಎಸ್‌ಪಿ ಅವರ ಪ್ರಕಾರ ಐವರನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ನಾನು ಪೊಲೀಸ್ ಅಧಿಕಾರಿಗಳಿಗೆ ಈ ಪ್ರಕರಣದ ಹಿಂದೆ ಎಷ್ಟೇ ದೊಡ್ಡವರು ಇದ್ದರೂ ಅವರನ್ನು ಬಂಧಿಸಿ, ಕ್ರಮ ವಹಿಸುವಂತೆ ಸೂಚಿಸಿದ್ದೇವೆ. ಗಣೇಶ ಅವರ ಏಳಿಗೆ ಸಹಿಸದ ಎದುರಾಳಿಗಳು ಈ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಪೊಲೀಸರು ಶುಕ್ರವಾರ ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಎನ್ನುವುದು ನಮ್ಮ ಆಗ್ರಹವಾಗಿದೆ’ ಎಂದರು.
ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಮದ್ಯ ಮತ್ತು ಗಾಂಜಾದ ನಶೆ ವಿಪರೀತವಾಗುತ್ತಿದೆ. ಚಿಕ್ಕಮಗಳೂರಿನ ಇತಿಹಾಸದಲ್ಲಿಯೇ ಇದು ರಾಜಕೀಯ ಸಿದ್ಧಾಂತದ ಹಿನ್ನೆಲೆಯಲ್ಲಿ ನಡೆದ ಮೊದಲ ಬರ್ಬರ ಕೃತ್ಯವಾಗಿದೆ. ಗಣೇಶಗೌಡ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲು ಶ್ರಮಿಸುತ್ತಿದ್ದರು. ಜನಸಾಮಾನ್ಯರಿಂದ ಮುಖಂಡರವರೆಗೆ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇವರ ಹತ್ಯೆ ಆಘಾತ ತಂದಿದೆ. ಚಿಕ್ಕಮಗಳೂರಿನಲ್ಲಿ ಎಂತಹ ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ರಾಜಕಾರಣದ ನಂತರ ಎಲ್ಲರೂ ವಿಶ್ವಾಸದಿಂದಲೇ ಇರುತ್ತಿದ್ದೆವು. ಈ ಕೃತ್ಯ ರಾಜಕೀಯ ಸಿದ್ಧಾಂತಕ್ಕಾಗಿಯೇ ನಡೆದಿದೆ ಎಂದರು.
ಗಾಂಜಾ, ಅಫೀಮು, ಮದ್ಯದ ನಶೆಗಿಂತ ಇತ್ತೀಚೆಗೆ ಯುವಜನರನ್ನು ಧರ್ಮ, ಜಾತಿಯ ಹೆಸರಿನಲ್ಲಿ ಎತ್ತಿ ಕಟ್ಟುತ್ತಿರುವುದು ಯುವಜನರ ಜೀವನವನ್ನೇ ಹಾದಿ ತಪ್ಪಿಸುವ ಕೆಲಸವಾಗಿದೆ. ಕಾನೂನನ್ನು ಬಿಗಿಗೊಳಿಸಿ ಇಂತಹ ಕೃತ್ಯ ಎಸಗುವ ಯಾರಿಗೆ ಆದರೂ ಕಠಿಣ ಶಿಕ್ಷೆ ನೀಡುವ ಜೊತೆಗೆ ಅವರನ್ನು ಗಡಿಪಾರು ಮಾಡಬೇಕಾಗಿದೆ. ಈ ಭಾಗದಲ್ಲಿ ಇಂತಹ ಕೃತ್ಯಗಳು ಆರಂಭವಾದರೆ ಜನರು ಭಯದಿಂದ ಜೀವನ ನಡೆಸುವ ಅಥವಾ ಓಡಾಡುವ ಪರಿಸ್ಥಿತಿ ಉದ್ಭವವಾಗಲಿದೆ. ಇದಕ್ಕೆ ಆಸ್ಪದ ನೀಡದೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಕಠಿಣ ಕ್ರಮ ವಹಿಸಲು ಮುಂದಾಗಲಿ ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಎಂ.ಎಲ್. ಮೂರ್ತಿ, ಕಾರ್ಯಕರ್ತರು ಇದ್ದರು.
ನಿಷ್ಪಕ್ಷಪಾತ ತನಿಖೆಗೆ ಸಹಕಾರ ನೀಡಿ ‘
ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅದನ್ನು ಹತ್ಯೆಯ ಮಟ್ಟಕ್ಕೆ ಒಯ್ಯುವುದು ಸರಿಯಲ್ಲ. ಒಮ್ಮೆ ಹಿಂಸಾ ರಾಜಕಾರಣ ಆರಂಭವಾದರೆ ಅದನ್ನು ನಿಯಂತ್ರಿಸುವುದು ಸುಲಭವಲ್ಲ. ಕೃತ್ಯ ಎಸಗಿದವರು ಯಾವ ಸಂಘಟನೆಗೆ ಸೇರಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲು ಮತ್ತು ತೊಂದರೆಗೆ ಸಿಲುಕಿದವರಿಗೆ ನ್ಯಾಯ ಕೊಡಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಲೇಬೇಕಿದೆ. ವಿರೋಧ ಪಕ್ಷದವರು ಸಹಿತ ಯಾರನ್ನು ಬೆಂಬಲಿಸದೆ ನಿಷ್ಪಕ್ಷಪಾತ ತನಿಖೆಗೆ ಸಹಕಾರ ನೀಡಬೇಕಿದೆ. ಸಖರಾಯಪಟ್ಟಣದಲ್ಲಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದ್ದು ಕಾಂಗ್ರೆಸ್‌ಗೆ ಗಟ್ಟಿ ನೆಲೆ ಕಲ್ಪಿಸಲು ಗಣೇಶಗೌಡ ಹೆಚ್ಚಿನ ಶ್ರಮ ವಹಿಸುತ್ತಿದ್ದರು. ಈ ಹಿನ್ನೆಲೆ ರಾಜಕೀಯವಾಗಿ ಹಲವು ಎದುರಾಳಿಗಳನ್ನು ಕೂಡ ಸೃಷ್ಟಿಸಿಕೊಂಡಿದ್ದರು. ರಾಜಕೀಯ ಸಿದ್ಧಾಂತಕ್ಕೆ ಈ ಹತ್ಯೆ ನಡೆದಿದ್ದರೆ ಅದನ್ನು ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ ಖಂಡಿಸುತ್ತದೆ ಮತ್ತು ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸುತ್ತೇವೆ’ ಎಂದು ಮುಖಂಡ ಬಿ.ಎಲ್. ಶಂಕರ್ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.