
ಕೊಪ್ಪ: ‘ದೇವರಾಜ ಅರಸು ಕಾಲದಲ್ಲಿ ಪರಿಶಿಷ್ಟರಿಗೆ ಮಂಜೂರಾದ ಜಾಗ ಪೋಡಿಯಾಗಿಲ್ಲ, ಜಂಟಿ ಸರ್ವೆ ಯಾವಾಗ ಮಾಡುತ್ತೀರಿ’ ಎಂದು ಆದಿವಾಸಿ ಮುಖಂಡ ಮರಿಯಪ್ಪ ಪ್ರಶ್ನಿಸಿದರು.
ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಲಿಖಿತಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲ್ಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು– ಕೊರತೆ ಸಭೆಯಲ್ಲಿ ಮಾತನಾಡಿದ ಮರಿಯಪ್ಪ, ‘ಜಂಟಿ ಸರ್ವೆ ಮಾಡುವುದಾಗಿ ಎರಡೂವರೆ ವರ್ಷದಿಂದ ಹೇಳುತ್ತಿದ್ದೀರಿ, ನಾವು ಸಾಯುವಷ್ಟರಲ್ಲಿ ಸರ್ವೆ ಮಾಡುವಿರಾ’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಲಿಖಿತಾ ಮೋಹನ್, ‘ಒಂದು ವಾರದಲ್ಲಿ ಸರ್ವೆ ಕಾರ್ಯ ಆರಂಭಿಸುತ್ತೇವೆ’ ಎಂದರು.
‘ಕುದುರೆಮುಖ ವ್ಯಾಪ್ತಿಯ ಮಾದಲಬೈಲ್ ಎಂಬಲ್ಲಿ ನಮ್ಮ ಜನರಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಮೂಲ ಸೌಕರ್ಯಗಳಿಲ್ಲ’ ಎಂದು ಮರಿಯಪ್ಪ ಹೇಳಿದರು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿ ಪ್ತತಿಕ್ರಿಯಿಸಿ, ‘ನೆಲದೊಳಗೆ ಕೇಬಲ್ ಅಳವಡಿಸುವಂತೆ ಮೆಸ್ಕಾಂ ಗೆ ತಿಳಿಸಿದ್ದೇವೆ’ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಇಲಾಖೆಯ ಸುಧೀರ್ ಪಟೇಲ್, ‘ಲಿಖಿತವಾಗಿ ಬಂದ ಅರ್ಜಿಗಳನ್ನು ನಮ್ಮ ಹಂತದಲ್ಲಿ ಬಗೆಹರಿಸಿಕೊಡುತ್ತೇವೆ’ ಎಂದರು.
‘ಪಟ್ಟಣದಲ್ಲಿ ನಿಯಮ ಮೀರಿ ಬೆಳಿಗ್ಗೆ 7 ಗಂಟೆಗೆ ಬಾಗಿಲ ಬದಿಯಿಂದ ಮದ್ಯ ಮಾರಾಟ ನಡೆಯುತ್ತಿದೆ, ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ’ ಎಂದು ಸುನಿಲ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ‘ಅನಿರೀಕ್ಷಿತ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮ ವಹಿಸಬೇಕು’ ಎಂದು ಅಬಕಾರಿ ಇನ್ ಸ್ಪೆಕ್ಟರ್ ದಿಲೀಪ್ ಕುಮಾರ್ ಅವರಿಗೆ ಸೂಚಿಸಿದರು.
‘ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿದರೆ ಅಂಗಡಿ ಪರವಾನಗಿ ರದ್ದು ಮಾಡಿಸಿ’ ಎಂದು ಕೆಡಿಪಿ ಸದಸ್ಯ ರಾಜಶಂಕರ್ ಹೇಳಿದರು. ಇನ್ ಸ್ಪೆಕ್ಟರ್ ದಿಲೀಪ್ ಕುಮಾರ್, ‘ಪ್ರಕರಣ ದಾಖಲಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
ಶಾಂತಿಪುರ ರವಿ ಮಾತನಾಡಿ, ‘ಹೇರೂರು ಗ್ರಾಮದಲ್ಲಿ ದಲಿತರು ಮನೆ ಕಟ್ಟಲು ಅರಣ್ಯ ಇಲಾಖೆಯವರು ಬಿಟ್ಟಿಲ್ಲ, ಈಗ ಖಾಸಗಿ ವ್ಯಕ್ತಿ ತೋಟ ಮಾಡಿಕೊಂಡಿದ್ದಾರೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಲಯಾರಣ್ಯಾಧಿಕಾರಿ ರಂಗನಾಥ್, ‘ಅರಣ್ಯ ಒತ್ತುವರಿ ಮಾಡಿದ ಖಾಸಗಿ ವ್ಯಕ್ತಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ’ ಎಂದು ಹೇಳಿದರು.
ಮುಖಂಡ ರವೀಂದ್ರ ಕವಡೆಕಟ್ಟೆ ಮಾತನಾಡಿ, ‘ಕವಡೆಕಟ್ಟೆಯಿಂದ ಬಂಡಿಗಡಿ ಗ್ರಾಮ ಪಂಚಾಯಿತಿಗೆ ಒಂದು ಸಣ್ಣ ಕೆಲಸಕ್ಕೂ 25 ಕಿಲೋಮೀಟರ್ ದೂರ ಸುತ್ತಾಡಿ ಹೋಗಬೇಕಿದೆ. ತುಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ಕೊಡಿ ಅಥವಾ ನಮ್ಮ ಊರನ್ನು ಹಿರೇಕೊಡಿಗೆ ವ್ಯಾಪ್ತಿಗೆ ಸೇರಿಸಿ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ‘ಒಂದು ಪಂಚಾಯಿತಿ ವ್ಯಾಪ್ತಿಯಿಂದ ಇನ್ನೊಂದು ಪಂಚಾಯಿತಿ ವ್ಯಾಪ್ತಿಗೆ ಸೇರಿಸುವುದು ಕಷ್ಟ. ಸೇತುವೆ ನಿರ್ಮಿಸಿದರೆ ಅನುಕೂಲವಾಗಬಹುದು' ಎಂದರು. ಇದಕ್ಕೆ ಧ್ವನಿಗೂಡಿಸಿದ ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಅಶೋಕ್, ‘ಸರ್ಕಾರಕ್ಕೆ ವರದಿ ಹೋಗಿದೆ, ಸೇತುವೆ ನಿರ್ಮಾಣವಾಗಲಿದೆ ಎಂಬ ಮಾಹಿತಿ ಇದೆ’ ಎಂದರು.
ಸಮಾಜ ಕಲ್ಯಾಣ ಇಲಾಖೆ ಸತೀಶ್, ಮುಖಂಡರಾದ ಹೊಸಮಕ್ಕಿ ರತ್ನಾಕರ್, ವಾಸಪ್ಪ ಕುಂಚೂರು, ಎ.ಜಿ.ಕಟ್ಟೆ ರಮೇಶ್ ಭಾಗವಹಿಸಿದ್ದರು.
Cut-off box - ‘ಬಾವಿ ನೀರು ಬಳಕೆಗೆ ಅಡ್ಡಿ’ ನಾರ್ವೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿ ಸಾರ್ವಜನಿಕ ಬಾವಿ ನೀರು ಬಳಕೆಗೆ ಅಡ್ಡಿಯಾಗುವಂತೆ ತಮ್ಮ ಸುಪರ್ದಿಗೆ ಪಡೆಯಲು ಯತ್ನಿಸಿದ್ದಾರೆ. ಸಮಸ್ಯೆ ಆಲಿಸಲು ಬಂದಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರು ಸಾರ್ವಜನಿಕ ಆಸ್ತಿ ರಕ್ಷಣೆ ಮಾಡುವ ಬದಲು ಖಾಸಗಿ ವ್ಯಕ್ತಿ ಪರ ನಿಂತಿದ್ದಾರೆ ಎಂಬ ವಿಚಾರದಲ್ಲಿ ಹೆಚ್ಚು ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಮುಖಂಡ ಬೆಳಗೊಳ ಆನಂದ ‘ಪಂಚಾಯಿತಿಗೆ ಸೇರಿದ ಬಾವಿಯನ್ನು ಪರಿಶಿಷ್ಟರು ಬಳಸಲು ಮುಕ್ತಗೊಳಿಸಬೇಕು. ರಕ್ಷಣೆ ಮಾಡಬೇಕಾದವರು ಖಾಸಗಿ ವ್ಯಕ್ತಿ ಪರ ನಿಲ್ಲುವುದು ಸರಿಯಲ್ಲ. ಕಾಂಪೌಂಡ್ ನಿರ್ಮಾಣಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿ ಅಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶ ಮಾಡಿದಂತೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ‘ಅಂದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಾನು ಯಾವುದೇ ಪರ ವಹಿಸುವುದು ಸೂಕ್ತವಾಗಿರಲಿಲ್ಲ. ಏನೇ ಕ್ರಮ ಕೈಗೊಂಡರು ಕೂಡ ಕಾನೂನು ಪ್ರಕಾರವೇ ಮಾಡಬೇಕಿದೆ. ನಾಳೆಯೇ ನೋಟಿಸ್ ಕೊಟ್ಟು ತೆರವುಗೊಳಿಸುವ ಪ್ರಕ್ರಿಯೆ ನಡೆಸಲಾಗುವುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.