
ಕೊಪ್ಪದ ಸೇಂಟ್ ಜೋಸೆಫರ ಪ್ರೌಢಶಾಲೆಯಲ್ಲಿ ನಡೆದ ವಜ್ರ ಮಹೋತ್ಸವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ಕೊಪ್ಪ: ‘ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ, ನಾನು ಸಚಿವನಾದ ಬಳಿಕ ಹಲವು ಸುಧಾರಣೆಗಳನ್ನು ತಂದಿದ್ದೇನೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಪಟ್ಟಣದಲ್ಲಿರುವ ಸೇಂಟ್ ಜೋಸೆಫರ ಪ್ರೌಢಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ರಾತ್ರಿ ಉದ್ಘಾಟಿಸಿ ಮಾತನಾಡಿದ ಸಚಿವರು, ‘ದೇವಸ್ಥಾನ ಚಿಕ್ಕದು ಕಟ್ಟಿ, ಶಾಲೆ ದೊಡ್ಡದಾಗಿ ಕಟ್ಟಿ, ಶಾಲೆಯಲ್ಲಿ ಸರಿಯಾದ ಸಮಯಕ್ಕೆ ಬೆಲ್ ಹೊಡೆದಾಗ ಮಾತ್ರ ದೇಶ ಉದ್ದಾರವಾಗುತ್ತದೆ’ ಎಂದರು.
ಹೊಟ್ಟೆ ಪಾಡಿಗೆ ದುಡಿಯುತ್ತಿದ್ದ ಕಾಲದಲ್ಲಿ ಕೂಲಿ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ₹1 ಸ್ಟೈ ಫಂಡ್ ಕೊಡಲು ಆರಂಭಿಸಿರುವುದು ಹಾಗೂ ಆಹಾರ ಉತ್ಪನ್ನ ಹೆಚ್ಚಿಸಲು ಉತ್ತೇಜನ ನೀಡಿ, ರೈತಪರವಾಗಿ ನಮ್ಮ ತಂದೆ ಬಂಗಾರಪ್ಪಾಜಿ ಮುಖ್ಯಮಂತ್ರಿ ಇದ್ದಾಗ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಅರ್ಸುಲೈನ್ ಪ್ರಾನ್ಸಿಸ್ಕನ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ವಂದನೀಯ ಭಗಿನಿ ಫಿಲೋಮಿನ ನೊರೊನ್ಹ, ಈ ವಿದ್ಯಾ ಸಂಸ್ಥೆ ಮಕ್ಕಳಿಗೆ ಉನ್ನತ ಮೌಲ್ಯಗಳನ್ನು ಕಲಿಸಿ ದೇಶಕ್ಕೆ ನೀಡಿದೆ. ಕನ್ನಡ ಮಾಧ್ಯಮದ ಮಕ್ಕಳು ಚೆನ್ನಾಗಿ ಓದಿ, ದೇಶಕ್ಕೆ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.
ಬಯಲು ರಂಗ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ‘ನನ್ನ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರು 3 ಕೆಪಿಎಸ್ ಶಾಲೆ ಮಂಜೂರು ಮಾಡಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ಕೊಟ್ಟು, ಪೋಷಿಸಿ ಬೆಳೆಸುವ ಕೆಲಸ ಮಾಡುತ್ತಿದ್ದೇನೆ’ ಎಂದರು.
ಅಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಅವರು, ಮಲೆನಾಡು ಭಾಗದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸವಲತ್ತು, ಶಿಕ್ಷಕರ ಕೊರತೆ ಇದೆ. ಸರ್ಕಾರಿ ಶಾಲೆ ಉಳಿವಿಗಾಗಿ ಸಂಘಟನೆ ಅಗತ್ಯ. ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡ ಅವರ ಕಾಲದಲ್ಲಿ ಹೆಚ್ಚು ಮನೆ ಮಂಜೂರು, ಶಿಕ್ಷಕರ ನೇಮಕ, ಸೇತುವೆ, ರಸ್ತೆ ನಿರ್ಮಾಣ ಆಗಿರುವುದು ಕಂಡು ಬರುತ್ತದೆ. ಇಲ್ಲಿನ ರಸ್ತೆಗೆ ಗೋವಿಂದೆ ಗೌಡ ಅವರ ಹೆಸರನ್ನು ಇಡಬೇಕು ಎಂದರು.
ನಟಿ ಪೂಜಾಗಾಂಧಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಅವಕಾಶವಂತರಿಗೆ ಅವಕಾಶ ಕಲ್ಪಿಸುವುದು ಶಿಕ್ಷಣ ಕ್ಷೇತ್ರ ಮಾತ್ರ. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ತೀವ್ರಗತಿಯಲ್ಲಿ ಮಕ್ಕಳ ಕೊರತೆಯಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆ ಮಾದರಿ ಶಾಲೆ ಮಾಡಿ. ಅವುಗಳಿಗೆ ಆದ್ಯತೆ ಮೇಲೆ ಮೂಲಭೂತ ಸೌಕರ್ಯ ಕೊಡಿ’ ಎಂದು ಹೇಳಿದರು.
ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಮೆಲ್ವಿನ್ ಟೆಲ್ಲಿಸ್ ಆಶೀರ್ವಚನ ನೀಡಿ, ‘ಮೌಲ್ಯಗಳನ್ನು ಬಿತ್ತುವ ದೇವಸ್ಥಾನವೆಂದರೆ ಅದು ಶಾಲೆ. ದೇವರು ಎಲ್ಲರ ಅಂತರಾತ್ಮದಲ್ಲಿದ್ದಾನೆ. ದೇವಸ್ಥಾನ, ಚರ್ಚ್, ಮಸೀದಿ, ಶಾಲೆಯಲ್ಲಿ ದೇವರಿದ್ದಾನೆ. ಬಸವಣ್ಣ ಹೇಳಿದಂತೆ ದೇಹವೇ ದೇಗುಲವಾಗಿದೆ. ಯೇಸುಕ್ರಿಸ್ತರು ಭೂಮಿಗೆ ಬಂದು 2025 ವರ್ಷಗಳಾಯಿತು., ಈ ಹೊತ್ತಿನಲ್ಲಿ ಶಾಲೆ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದಾಯಕವಾಗಿದೆ’ ಎಂದರು.
ವಜ್ರ ಮಹೋತ್ಸವ ಆಚರಣ ಸಮಿತಿ ಸಂಚಾಲಕ ಸುಧೀರ್ ಕುಮಾರ್ ಮುರೊಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಎಲ್.ದೀಪಕ್ ಶಾಲೆಗೆ ವಿವಿಧ ಕೊಡುಗೆಗಳ ಬಗ್ಗೆ ಮಾತನಾಡಿದರು. ಹಿರಿಯ ನಿವೃತ್ತ ಶಿಕ್ಷಕಿ 92 ವರ್ಷದ ಘಟ್ರೂಟ್ ಅವರನ್ನು ಗೌರವಿಸಲಾಯಿತು.
ಅರ್ಸುಲೈನ್ ಪ್ರಾನ್ಸಿಸ್ಕನ್ ಎಜುಕೇಷನ್ ಸಂಸ್ಥೆ ಮೈಸೂರು ಪ್ರಾಂತ್ಯದ ಉಪ ಕಾರ್ಯದರ್ಶಿ ವಂದನಿಯ ಭಗಿನಿ ಜಸಿಂತ ರೇರಾ, ಸೇಂಟ್ ಜೋಸೆಫರ ಕಾನ್ವೆಂಟ್ ಸಂಚಾಲಕಿ ವಂದನಿಯ ಭಗಿನಿ ಆನೆಟ್ ಕೊರೆಯಾ, ಪೋಷಕ ಬೋಧಕರ ಸಂಘದ ಉಪಾಧ್ಯಕ್ಷ ಹರೀಶ್ ಪೂಜಾರಿ, ಮುಖ್ಯ ಶಿಕ್ಷಕಿ ಸಿ.ಅನಿತಾ ಶಾಂತಿ ಮಿನೆಜಸ್, ಶಿಕ್ಷಕ ಛಾಯಾಪತಿ, ಪ್ರಕಾಶ್ ಇದ್ದರು.
ಗಣ್ಯರೊಂದಿಗೆ ‘ಆಪ್ತ’ ಮೆರವಣಿಗೆ
ಸಂಜೆ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅರಳಿಕಟ್ಟೆಯಿಂದ ಶಾಲಾ ಆವರಣದವರೆಗೆ ಗಣ್ಯರೊಂದಿಗೆ ‘ಆಪ್ತ’ ಮೆರವಣಿಗೆ ನಡೆಯಿತು. ಎಸ್.ವಿ.ಟಿ ರಸ್ತೆ ಇಕ್ಕೆಲಗಳಲ್ಲಿ ವಿದ್ಯುತ್ ದೀಪಾಲಂಕಾರ ಕಂಗೊಳಿಸಿತು. ಬಿಂತ್ರವಳ್ಳಿಯ ಮಹೇಶ್ವರಿ ಚೆಂಡೆ ಬಳಗ ಮೆರವಣಿಗೆಗೆ ಮೆರುಗು ತಂದಿತು. ಇದೇ ಸಂದರ್ಭ ನಟಿ ಪೂಜಾಗಾಂಧಿ ಜತೆಗೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಅರಳಿಕಟ್ಟೆ ಬಳಿ ಗಣ್ಯರನ್ನು ಸ್ವಾಗತಿಸುವ ಸಂದರ್ಭದಲ್ಲಿ ಚೆಂಡೆ ವಾದನಕ್ಕೆ ಹಿರಿಯ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು ಅವರೊಂದಿಗೆ ನಟಿ ಪೂಜಾಗಾಂಧಿ ಸಾಹಿತಿ ದೀಪಾ ಹಿರೇಗುತ್ತಿ ಹೆಜ್ಜೆ ಹಾಕಿ ಹುರಿದುಂಬಿಸಿದರು. ಬೆಳಿಗ್ಗೆ ಕಾರ್ಯಕ್ರಮ: ಬೆಳಿಗ್ಗೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಭೋಜನ ವ್ಯವಸ್ಥೆ ಇತ್ತು. ಹಿರಿಯ ವಿದ್ಯಾರ್ಥಿಗಳು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ವಿದ್ಯಾರ್ಥಿ ಜೀವನದ ತಮ್ಮ ಅನುಭವ ಹಂಚಿಕೊಂಡು ಆಪ್ತತೆ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.