
ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತಹ ಯಾವುದೇ ಹೇಳಿಕೆ ನೀಡಿಲ್ಲ. ಆದರೂ ಪೊಲೀಸರ ಮೂಲಕ ಬಿಜೆಪಿ ಹೋರಾಟ ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಆರೋಪಿಸಿದರು.
ಸರ್ಕಾರದ ವೈಫಲ್ಯದ ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಸಂತೋಷ್ ಕೋಟ್ಯಾನ್ ಅವರು ಜಾತಿ ನಿಂದನೆ ಮಾಡಿಲ್ಲ. ಆ ರೀತಿ ಮಾಡಿದ್ದರೆ ತಿದ್ದುವ ಕೆಲಸವನ್ನು ಪಕ್ಷದ ಹಿರಿಯರು ಮಾಡುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.
ಪೊಲೀಸ್ ಇಲಾಖೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದೆ. ಸರ್ಕಾರ ವೈಫಲ್ಯ ಖಂಡಿಸುವವರನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾದೆ. ಪೊಲೀಸ್ ಇಲಾಖೆಯ ಈ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಇರುವುದು ನಿಜವಾಗಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲು. ಆದರೆ, ಸುಳ್ಳು ಮೊಕದ್ದಮೆ ದಾಖಲಿಸುವ ಮೂಲಕ ಕಾಂಗ್ರೆಸ್ ಈ ಕಾಯ್ದೆಗೆ ಧಕ್ಕೆ ತರುತ್ತಿದೆ. ಯಾರದೊ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಈ ಕೆಲಸ ಮಾಡಬಾರದು. ಕಾನೂನು ಉಳಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ‘ಸಂತೋಷ್ ಕೋಟ್ಯಾನ್ ಬಳಸಿರುವ ಪದಕ್ಕೂ ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗೂ ಸಂಬಂಧ ಇಲ್ಲ. ದೂರು ನೀಡಿರುವ ಅನಿಲಕುಮಾರ್ ಅವರಿಗೂ ಸಂಬಂಧ ಇಲ್ಲ. ಗೃಹ ಮಂತ್ರಿ ಜಿ.ಪರಮೇಶ್ವರ ಅವರನ್ನು ಮೆಚ್ಚಿಸಲು ಪೊಲೀಸರು ಈ ಕೆಲಸ ಮಾಡಿದ್ದಾರೆ. ಅನಿಲಕುಮಾರ್ ಮೂಲಕ ದೂರು ಪಡೆದು ಪ್ರಕರಣ ದಾಖಲಿಸಿದ್ದಾರೆ’ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರೇಂದ್ರ, ಮುಖಂಡ ದೀಪಕ್ ದೊಡ್ಡಯ್ಯ, ಗ್ರಾಮಾಂತರ ಕಾರ್ಯದರ್ಶಿ ಯತೀಶ್, ಹಂಪಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.