
ಚಿಕ್ಕಮಗಳೂರು: ಸರ್ಕಾರಿ ಶಾಲೆಗಳು ಗುರುವಾರ ಆರಂಭಗೊಂಡಿವೆ. ಹಲವು ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಕಲಿಕೆ ಆರಂಭಿಸಿದರು.
ಬೇಸಿಗೆ ರಜೆಯಲ್ಲಿ ಸುತ್ತಾಡಿ ಮೊದಲ ದಿನ ಶಾಲೆಗೆ ಬಂದ ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಶಿಕ್ಷಕರು, ಮುಖ್ಯ ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ಶಾಲೆಗೆ ಹಾಜರಾಗಿದ್ದರು. ಶಾಲೆ ಆವರಣ, ಅಡುಗೆ ಮನೆ ಆವರಣ ಸ್ವಚ್ಛಗೊಳಿಸಿಕೊಂಡರು. ಕೆಲ ಶಾಲೆಗಳಲ್ಲಿ ಬುಧವಾರವೇ ಸ್ವಚ್ಛತೆ ಮುಗಿದಿದ್ದು, ಗುರುವಾರ ಹೂವುಗಳಿಂದ ಸಿಂಗರಿಸಿ ಮಕ್ಕಳನ್ನು ಬರ ಮಾಡಿಕೊಂಡರು.
ಕೆಲ ಶಾಲೆಗಳಲ್ಲಿ ಗುರುವಾರ ಸ್ವಚ್ಛತೆ ನಡೆದಿದ್ದು, ಶುಕ್ರವಾರ ಪ್ರಾರಂಭೋತ್ಸವ ನಡೆಯಲಿದೆ. ಬಿಸಿಯೂಟಕ್ಕೆ ಅಗತ್ಯ ಪಡಿತರ, ತರಕಾರಿ, ಮೊಟ್ಟೆ ಮತ್ತಿತರೆ ಸಾಮಗ್ರಿಗಳನ್ನು ಮೊದಲನೇ ದಿನವೇ ತಂದಿಟ್ಟುಕೊಳ್ಳಲಾಗಿದೆ. ದಿನ ಸಿಹಿಯೂಟ ನೀಡಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ.
ಮಕ್ಕಳು ಶಾಲೆಗೆ ಬಂದಾಗ ಪುಷ್ಪಾರ್ಚನೆ ಅಥವಾ ಗುಲಾಬಿ ನೀಡಿ ಸ್ವಾಗತಿಸಬೇಕು. ಅವರಿಗೆ ಮಧ್ಯಾಹ್ನ ಹಬ್ಬದ ರೀತಿಯಲ್ಲಿ ಸಿಹಿ ಊಟ ನೀಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ಶಾಲೆಗಳಲ್ಲಿ ಗುರುವಾರ ಸ್ವಚ್ಛತಾ ಕಾರ್ಯ ನಡೆಯಿತು. ಕೆಲವು ಶಾಲೆಯಲ್ಲಿ ತಳಿರುತೋರಣ ಕಟ್ಟಿ ಸಿಂಗರಿಸಿದ್ದು, ಮಕ್ಕಳನ್ನು ಸ್ವಾಗತಿಸಲು ಎಲ್ಲ ತಯಾರಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶಾಲೆಗೆ ಬಂದ ದಿನವೇ ಮಕ್ಕಳಿಗೆ ಪಠ್ಯ ಪುಸ್ತಕ ನೀಡಬೇಕು ಎಂಬ ಸೂಚನೆ ಇರುವ ಕಾರಣ ಬಹುತೇಕ ಶಾಲೆಗಳಿಗೆ ಈಗಾಗಲೇ ಪಠ್ಯ ಪುಸ್ತಕಗಳು ಸರಬರಾಜಾಗಿವೆ. ಜಿಲ್ಲೆಗೆ ಈಗಾಗಲೇ ಶೇ 80ರಷ್ಟು ಪಠ್ಯ ಪುಸ್ತಕಗಳು ಪೂರೈಕೆಯಾಗಿದೆ. ಸಮವಸ್ತ್ರ ಶೇ 50ರಷ್ಟು ಪೂರೈಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.