
ಕಡೂರು: ‘ರಾಜ್ಯದ ಜನರಿಗೆ ಆರ್ಥಿಕ ಪುನಃಶ್ಚೇತನ ನೀಡುವ ಉದ್ದೇಶದಿಂದಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಮಚ್ಚೇರಿ ಸಮೀಪದ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಜಾತಿಯಿಲ್ಲ. ಅದು ನೈಜ ಜಾತ್ಯತೀತ ಪಕ್ಷ. ಕಾರ್ಯಕರ್ತರು ಪಕ್ಷದ ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ‘ಗ್ಯಾರಂಟಿಯಿಂದ ಸರ್ಕಾರದ ಅಭಿವೃದ್ಧಿ ಮೊಟಕಾಗುತ್ತದೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸುಳ್ಳಾಗಿಸಿದೆ. ಕರ್ನಾಟಕದ ಅಭಿವೃದ್ಧಿಯು ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿದೆ’ ಎಂದರು
ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸದ ಶ್ರೇಯಸ್ ಪಟೇಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಮುಖಂಡರಾದ ನಿಕೇತ್ ರಾಜ್ ಮೌರ್ಯ, ಕಂಸಾಗರ ಸೋಮಶೇಖರ್, ಶರತ್ ಕೃಷ್ಣಮೂರ್ತಿ, ಗುಮ್ಮನಹಳ್ಳಿ ಅಶೋಕ್, ಕೆ.ಜಿ.ಶ್ರೀನಿವಾಸ ಮೂರ್ತಿ, ರೇಣುಕಾರಾಧ್ಯ, ದೊಣ್ಣೆಕೋರನಹಳ್ಳಿ ಉಮೇಶ್, ಹೋಚೀಹಳ್ಳಿ ಭೋಗಪ್ಪ ಪುರಸಭಾ ಸದಸ್ಯರು ಇದ್ದರು.
ಕಾಂಗ್ರೆಸ್ ಸ್ವಾಂತಂತ್ರ್ಯ ಹೋರಾಟಗಾರರ ಪಕ್ಷ. ಇತರೆ ಪಕ್ಷಗಳಿಗೆ ಹೇಳಿಕೊಳ್ಳಲೂ ಸ್ವಾತಂತ್ರ್ಯ ಹೋರಾಟಗಾರರಿಲ್ಲ. ಸರ್ದಾರ್ ಪಟೇಲರ ಪ್ರತಿಮೆ ಮಾಡಿಕೊಂಡು ಹೋಗುವ ಪರಿಸ್ಥಿತಿ ಆ ಪಕ್ಷಗಳದ್ದಾಗಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳನ್ನೇ ವಿರೋಧ ಪಕ್ಷಗಳು ಅನುಕರಿಸುತ್ತಿವೆ. ಜನರಿಂದ ಆಯ್ಕೆಯಾದ ಪಕ್ಷ ಯಾವುದೇ ಇರಲಿ, ಇಡೀ ರಾಷ್ಟ್ರದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಬೇಕು. ಧರ್ಮಗಳ ನಡುವೆ ದ್ವೇಷ ತಂದಿಡುವ ಕಾರ್ಯ ಆಗಬಾರದು. ಇಂದಿಗೂ ಆಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವ ಅನುಕರಣೀಯ’ ಎಂದು ಸಚಿವ ಜಾರ್ಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.