ADVERTISEMENT

ವೈಕಲ್ಯ ಮೀರಿದ ‘ಶ್ರೀಚಿತ್ರಾ’ ಹೆಜ್ಜೆಗಳು!

ಭರತನಾಟ್ಯ ರಂಗಪ್ರವೇಶ 16ಕ್ಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 4:10 IST
Last Updated 14 ನವೆಂಬರ್ 2025, 4:10 IST
ಶ್ರೀಚಿತ್ರಾ ಅವರಿಗೆ ಗುರು ಶ್ವೇತಾ ಮಂಜುನಾಥ್‌ ಮಾರ್ಗದರ್ಶನ
ಶ್ರೀಚಿತ್ರಾ ಅವರಿಗೆ ಗುರು ಶ್ವೇತಾ ಮಂಜುನಾಥ್‌ ಮಾರ್ಗದರ್ಶನ   

ಚಿತ್ರದುರ್ಗ: ಮಾತುಬಾರದ, ಕಿವಿ ಕೇಳದ ವೈಕಲ್ಯದ ನಡುವೆಯೂ ಆರ್‌. ಶ್ರೀಚಿತ್ರಾ ಯುವ ಪೀಳಿಗೆಗೆ ಪ್ರೇರಣೆಯಾಗಿ ನಿಂತಿದ್ದಾರೆ. ವೈಕಲ್ಯವನ್ನು ಮೀರಿ ನೃತ್ಯಗುರು ಶ್ವೇತಾ ಮಂಜುನಾಥ್‌ ಅವರ ಮಾರ್ಗದರ್ಶನದಲ್ಲಿ ಅವರು ಭರತನಾಟ್ಯ ಕಲಿತಿದ್ದಾರೆ. ನ.16ರಂದು ನಗರದ ಜಿ.ಜಿ. ಮುದಾಯಭವನದಲ್ಲಿ ರಂಗಪ್ರವೇಶವಿದ್ದು, ಶ್ರೀಚಿತ್ರಾ ಕಲಾ ಪ್ರಪಂಚಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಸಿ. ರಮೇಶ್‌ ಹಾಗೂ ಸಿ.ಆರ್‌. ವಿಜಯಾ ಅವರ ಪುತ್ರಿಯಾಗಿರುವ ಶ್ರೀಚಿತ್ರಾ ಅವರು ಅಚಲ ಮನೋಬಲ, ಧೈರ್ಯ ಹಾಗೂ ಪರಿಶ್ರಮದ ಮೂಲಕ ನಾಟ್ಯರಾಣಿಯನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಲಿಸುವ ಮತ್ತು ಮಾತನಾಡುವ ಸಾಮರ್ಥ್ಯವಿಲ್ಲ ಎಂಬ ಕಾರಣಕ್ಕೆ ಅವರು ತಮ್ಮ ಕಲಿಕೆಯನ್ನು ತ್ಯಜಿಸಲಿಲ್ಲ. ಅಂತರಂಗದಲ್ಲೇ ಹೆಜ್ಜೆ, ರಾಗ, ಲಯ, ತಾಳಗಳನ್ನು ಅರಿತು ಭರತನಾಟ್ಯ ಕಲೆ ಮೈಗೂಡಿಸಿಕೊಂಡಿದ್ದಾರೆ. ಇದಕ್ಕೆ ತಂದೆ–ತಾಯಿಯ ಪ್ರೋತ್ಸಾಹ, ನೃತ್ಯ ಗುರುವಿನ ಪ್ರೀತಿ, ಒತ್ತಾಸೆ, ಪ್ರೇರಣೆಯೂ ಕಾರಣವಾಗಿದೆ.

ಶ್ರೀಚಿತ್ರಾ 10ನೇ ತರಗತಿವರೆಗೆ ಜ್ಞಾನವಿಕಾಸ ವಿದ್ಯಾಸಂಸ್ಥೆಯಲ್ಲಿ ಕಲಿತಿದ್ದಾರೆ. ಸದ್ಯ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಪ್ರೌಢ ಶಿಕ್ಷಣ ಮಂಡಳಿಯ ನಡೆಸುವ ನೃತ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅವರು ನೃತ್ಯವನ್ನೇ ಬದುಕಿನ ಭಾಗ ಮಾಡಿಕೊಳ್ಳಲು ಹೊರಟು ನಿಂತಿದ್ದಾರೆ. ನಗರದ ಪ್ರತಿಷ್ಠಿತ ನಾಟ್ಯ ಸಂಸ್ಥೆಯಾದ ಲಾಸಿಕಾ ಫೌಂಡೇಶನ್ ಕಲಾತಂಡದೊಂದಿಗೆ ಹಲವು ವೇದಿಕೆಗಳಲ್ಲಿ ಈಗಾಗಲೇ ಕಾರ್ಯಕ್ರಮ ನೀಡಿದ್ದಾರೆ. ಇದೀಗ ನಾಟ್ಯ ಶಾಸ್ತ್ರದ ಸಂಪ್ರದಾಯದಂತೆ ಗುರು–ಹಿರಿಯರ ಸಮ್ಮುಖದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡುತ್ತಿದ್ದಾರೆ.

ADVERTISEMENT

ನ.16, ಸಂಜೆ 6.30ಕ್ಕೆ ಅವರು ಹೆಜ್ಜೆ ಗುರುತು ಮೂಡಿಸಲಿದ್ದಾರೆ. ಭರತನಾಟ್ಯ ರಂಗಪ್ರವೇಶದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ, ಚೈತನ್ಯ ಪಿಯು ಕಾಲೇಜು ಕಾರ್ಯದರ್ಶಿ ಎಸ್.ಎಂ. ಮಧು, ಹರಿ ಎಜುಕೇಷನ್‌ ಟ್ರಸ್ಟ್ ನಿರ್ದೇಶಕಿ ರಕ್ಷಾ ಮಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ವೇತಾ ಮಂಜುನಾಥ್ ನಟುವಾಂಗ, ರೋಹಿತ್ ಭಟ್ ಉಪ್ಪೂರು ಗಾಯನ , ವಿಬುದೇಂದ್ರ ಸಿಂಹ ವಯಲಿನ್, ನಾಗೇಂದ್ರ ಪ್ರಸಾದ್ ಮೃದಂಗ , ಶಶಾಂಕ್ ಜೋಡಿದಾರ್ ಕೊಳಲು, ಸಾಯಿ ವಂಶಿ ರಿದಮ್ ಪ್ಯಾಡ್ ಸಹಕಾರ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.