ADVERTISEMENT

ಗಣಿಬಾಧಿತ ಯೋಜನೆ; ಕಾಮಗಾರಿಗಳ ನಿರ್ಲಕ್ಷ್ಯ ಸಲ್ಲದು

ಕೆಎಂಇಆರ್‌ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 16:25 IST
Last Updated 9 ಜೂನ್ 2025, 16:25 IST
ಹೊಸದುರ್ಗದ ತಾ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿದರು
ಹೊಸದುರ್ಗದ ತಾ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿದರು   

ಹೊಸದುರ್ಗ: ಗಣಿಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ (ಕೆಎಂಇಆರ್‌ಸಿ) ತಾಲ್ಲೂಕಿನಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು. ಬಗ್ಗೆ ನಿರ್ಲಕ್ಷ್ಯ ಬೇಡ. ಯಾವುದೇ ಕೆಲಸಗಳು ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು. ಯಾವುದೇ ದೂರು ಬಾರದಂತೆ ನಿಗಾವಹಿಸಬೇಕು’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಗಣಿಬಾಧಿತ ಪ್ರದೇಶಗಳ ಪುನಶ್ಚೇತನ ಹಾಗೂ ಪುನರ್ವಸತಿ ಯೋಜನೆಯಡಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಗಣಿಬಾಧಿತ ಪ್ರದೇಶಾಭಿವೃದ್ದಿ ಯೋಜನೆಯಡಿ ಹೊಸದುರ್ಗ ತಾಲ್ಲೂಕಿಗೆ ₹ 1,401 ಕೋಟಿ ನೀಡಲಾಗಿದೆ. ಅದರಲ್ಲಿ ₹631 ಕೋಟಿ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ನಿರ್ಲಕ್ಷ್ಯವಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್‌ ನಿರ್ದೇಶನವಿದೆ’ ಎಂದರು. 

ADVERTISEMENT

‘ಕೇವಲ ಪೂಜೆ ಮಾಡಿಸಿ ಸುಮ್ಮನಾದರೆ ಕೆಲಸ ಮಾಡಿಸುವವರು ಯಾರು? ಇನ್ನೊಂದು ತಿಂಗಳೋಳಗೆ ಕೆಲಸ ಪ್ರಾರಂಭಿಸದಿದ್ದರೆ ಗುತ್ತಿಗೆದಾರರಿಗೆ ನೋಟಿಸ್‌ ನೀಡಬೇಕು’ ಎಂದರು.

‘ಗಣಿಬಾಧಿತ ಪ್ರದೇಶಾಭಿವೃದ್ದಿ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅವಕಾಶವಿದ್ದರೂ ಎಂಜಿನಿಯರ್‌ಗಳ ಬೇಜವಾಬ್ದಾರಿತನದಿಂದ ಸಾಕಷ್ಟು ಗ್ರಾಮಗಳನ್ನು ಕೈಬಿಡಲಾಗಿದೆ. ಕೇವಲ ಈ ಭಾಗದ ಪಂಚಾಯಿತಿ ವ್ಯಾಪ್ತಿಯ ಮುಖ್ಯ ಗ್ರಾಮಗಳನ್ನು ಮಾತ್ರ ಪರಿಗಣಿಸಲಾಗಿದೆ.   ಹೊಂದಿಕೊಂಡಿರುವ ಸಣ್ಣ ಗ್ರಾಮಗಳನ್ನು ಸೇರಿಸಬಹುದಿತ್ತಲ್ಲವೇ’ ಎಂದು  ಶಾಸಕ ಬಿ.ಜಿ. ಗೋವಿಂದಪ್ಪ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಗ್ರಾಮೀಣ ಭಾಗದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಡಿ.ಸಿ, ಶಾಸಕರು ಬಂದು ನೋಡುವುದಕ್ಕೆ ಆಗುವುದಿಲ್ಲ. ಸ್ಥಳೀಯ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ತೆರಳಿ ಅದರ ಬಗ್ಗೆ ಕ್ರಮ ವಹಿಸಿಬೇಕು. ಈಗಲಾದರೂ ಗಣಿ ಬಾಧಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಗ್ರಾಮಗಳಲ್ಲಿನ ಕುಂದುಕೊರತೆಗಳ ಬಗ್ಗೆ ಗಮನ ಹರಿಸಬೇಕು’ ಎಂದು ಸೂಚಿಸಿದರು.

‘ಕಳೆದ ಮೂರ್ನಾಲ್ಕು ವರ್ಷಗಳಿಂದ ವಿವಿ ಸಾಗರ ಜಲಾಶಯದಲ್ಲಿ ನೀರು ನಿಂತಿದ್ದು, ಗಣಿಬಾಧಿತ ಪ್ರದೇಶದಲ್ಲಿ ಬರುವ ರೈತರ ತೆಂಗಿನ ತೋಟಗಳಿಗೆ ಶೀತವೇರಿದೆ. ಇದರಿಂದ ತೆಂಗಿನ ಮರಗಳು ಕೆಂಪು ಬಣ್ಣಕ್ಕೆ ತಿರುಗಿವೆ. ಅವುಗಳಿಗೆ ಬೇರೆ ಮಣ್ಣು ಹಾಕಲೇಬೇಕು. ಸುತ್ತಲೂ ಅರಣ್ಯ ಪ್ರದೇಶವಿರುವುದರಿಂದ ಈ ಬಾಗದ ರೈತರು ಮಣ್ಣು ಎಲ್ಲಿಂದ ತರಬೇಕು? ಮಣ್ಣು ತುಂಬಿದರೆ ಕಾನೂನು ಪುಸ್ತಕವಿಡಿದು ಕೇಸ್‌ ಹಾಕುತ್ತೀರಾ. ಹಾಗೆಂದು ನಾನೇನು ಅಕ್ರಮ ಮಾಡಿ ಎನ್ನುತ್ತಿಲ್ಲ, ನಿಮ್ಮ ಮಾರ್ಗ ಸೂಚಿಯಂತೆ ಮಣ್ಣು ತೆಗೆಯಲು ಅವಕಾಶ ನೀಡಿ’ ಎಂದು ಶಾಸಕ ಬಿ‌ ಜಿ ಗೋವಿಂದಪ್ಪ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಈ ವೇಳೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಎಸ್‌.ಜೆ. ಸೋಮಶೇಖರ್, ಉಪವಿಭಾಗಾಧಿಕಾರಿ ಮಹಾಬೂಬ್ ಜಿಲಾನಿ ಖುರೇಶಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಲೋಕೋಪಯೋಗಿ ಎಇಇ ಮಂಜುನಾಥ್‌, ತಹಶೀಲ್ದಾರ್ ತಿರುಪತಿ ಪಾಟೀಲ್‌ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.