ಹಿರಿಯೂರು: ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಡಿ. 4 ರಿಂದ 6 ರವರೆಗೆ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ ಆಸಕ್ತ ರೈತರಿಗೆ ಲಾಭದಾಯಕ ಕೃಷಿಗೆ ವಿವಿಧ ಕೃಷಿ ಯಂತ್ರೋಪಕರಣಗಳ ಪ್ರಾಮುಖ್ಯತೆ, ಉಪಯೋಗ ಮತ್ತು ನಿರ್ವಹಣೆ ಕುರಿತು ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ್ ತಿಳಿಸಿದ್ದಾರೆ.
ಡಿ. 4 ರಂದು ಬೆಳಿಗ್ಗೆ 9.30ಕ್ಕೆ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ಕೈಗೊಳ್ಳಲು ಬಳಸುವ ವಿವಿಧ ಕೃಷಿ ಯಂತ್ರೋಪಕರಣಗಳ ಪ್ರಾಮುಖ್ಯತೆ, ಉಪಯೋಗ ಕುರಿತು ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಶರಣಪ್ಪ ಜಂಗಂಡಿ ರೈತರಿಗೆ ಮಾಹಿತಿ ನೀಡುವರು.
ಸಮರ್ಪಕ ನೀರಿನ ನಿರ್ವಹಣೆಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಬಳಕೆ ಮತ್ತು ನಿರ್ವಹಣೆ ಕುರಿತು ತುಮಕೂರಿನ ಜೈನ್ ಇರಿಗೇಷನ್ ಕಂಪನಿಯ ಬೇಸಾಯಶಾಸ್ತ್ರಜ್ಞ ದೇವರಾಜ್ ಮಾಹಿತಿ ನೀಡುವರು. ಡಿ. 5 ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ಟ್ರ್ಯಾಕ್ಟರ್ ಚಾಲಿತ ಕೃಷಿ ಉಪಕರಣಗಳು, ತ್ಯಾಜ್ಯ ನಿರ್ವಹಣೆಯ ಉಪಕರಣಗಳು, ಕಳೆ ನಿರ್ವಹಣೆ, ಕಟಾವು ಮತ್ತು ಸಸ್ಯ ಸಂರಕ್ಷಣಾ ಉಪಕರಣ ಹಾಗೂ ಡೀಸೆಲ್ ಪಂಪ್‌ಸೆಟ್ ಉಪಯೋಗಿಸುವ ವಿಧಾನ ಮತ್ತು ನಿರ್ವಹಣೆ ಕುರಿತು ಚಿತ್ರದುರ್ಗ ವರ್ಷಾ ಅಸೋಸಿಯೇಟ್ಸ್ ಮತ್ತು ಹಿರಿಯೂರಿನ ಜನತಾ ಟ್ರೇಡರ್ಸ್‌ನ ತಾಂತ್ರಿಕ ಸಿಬ್ಬಂದಿ ವಿವರಿಸಲಿದ್ದಾರೆ. ಮಧ್ಯಾಹ್ನ ಇಫ್ಕೋ ಸಂಸ್ಥೆಯ ವ್ಯವಸ್ಥಾಪಕ ಚಿದಂಬರಮೂರ್ತಿ, ಕೃಷಿಯಲ್ಲಿ ನ್ಯಾನೋ ಗೊಬ್ಬರ ಮತ್ತು ಡ್ರೋಣ್ ಬಳಕೆ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡುತ್ತಾರೆ.
ಡಿ. 6 ರಂದು ಬೆಳಿಗ್ಗೆ 10 ಗಂಟೆಗೆ ಕೃಷಿಯಲ್ಲಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಬಳಕೆ ಮತ್ತು ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು. ಸೋಲಾರ್ ಚಾಲಿತ ಕೃಷಿ ಸಂಸ್ಕರಣಾ ಘಟಕಗಳು, ಸೋಲಾರ್ ಬೇಲಿ ಕುರಿತು ಸೆಲ್ಕೋ ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ ಭಾಗವತ್ ವಿಷಯ ಮಂಡಿಸುವರು. ನಂತರ ಉತ್ತಮ ಪಂಪ್‌ಸೆಟ್ ಆಯ್ಕೆ, ಅವುಗಳ ನಿರ್ವಹಣೆ ಹಾಗೂ ಕೃಷಿಯಲ್ಲಿ ಕಣ್ಗಾವಲಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಬಳಕೆ ಕುರಿತು ತಜ್ಞರು ತಿಳಿಸಲಿದ್ದಾರೆ.
ಆಸಕ್ತ 50 ರೈತರು 8277931058ಕ್ಕೆ ಕರೆಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಮೊದಲು ನೋಂದಾಯಿಸಿದ ರೈತರನ್ನು ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.