
ಹೊಳಲ್ಕೆರೆ: ಪದವಿ, ಪ್ರಶಸ್ತಿಗಳು ಅಹಂಕಾರ ತಂದುಕೊಡದೆ, ನಮ್ಮ ಹೊಣೆಗಾರಿಕೆಯನ್ನು ಹೆಚ್ಚಿಸಬೇಕು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಕೆಂಗುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ‘ಶಿವಾಂಜನೇಯ ರಂಗಮಂಟಪ’ ಉದ್ಘಾಟಿಸಿ ಮಾತನಾಡಿದರು.
ಪ್ರಶಸ್ತಿ, ಅಧಿಕಾರ, ಅಂತಸ್ತುಗಳು ಸಿಕ್ಕಿದಾಗ ನಮಗೆ ಅಹಂಕಾರ ಬರದಂತೆ ನೋಡಿಕೊಳ್ಳಬೇಕು. ಕೇವಲ ವಿದ್ಯಾವಂತರಾದರೆ ಸಾಲದು. ಸಮಾಜದ ಉತ್ತಮ ನಾಗರಿಕರಾಗಿ ಮಕ್ಕಳಿಗೆ ಸಂಸ್ಕೃತಿಯನ್ನು ತಿಳಿಸಬೇಕು. ಶಿಕ್ಷಣದ ಜತೆಗೆ ಸಂಸ್ಕಾರವೂ ಅಗತ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ. ಹಿರಿಯರ ಮಾತುಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಕಿರಿಯರಿಗೆ ಇರಬೇಕು. ಚಿಕ್ಕ ವಯಸ್ಸಿನಿಂದಲೇ ಸಂಸ್ಕಾರ, ಆಚಾರ, ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
‘ಸಮಾಜಕ್ಕೆ ಸತ್ಕಾರ್ಯ ಮಾಡುವ ಹಂಬಲ ಇರಬೇಕು. ನಮ್ಮ ನೆಮ್ಮದಿಯಲ್ಲಿ ಸಮಾಜದ ನೆಮ್ಮದಿಯೂ ಇದೆ ಎಂದು ತಿಳಿದುಕೊಂಡು ನಡೆಯಬೇಕು’ ಎಂದು ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಹೇಳಿದರು.
ಶಿವಕುಮಾರ್, ನಿವೃತ್ತ ಶಿಕ್ಷಕ ಎಲ್.ಕೆ. ಗಂಗಾಧರಪ್ಪ, ಎಲ್.ಬಿ. ರಾಜಪ್ಪ, ಎಚ್. ಮಹೇಶ್ವರಪ್ಪ, ಹಿರಣ್ಮಯಿ, ಪದವಿ ಕಾಲೇಜಿನ ಪ್ರಾಂಶುಪಾಲ ಎಸ್.ಪಿ. ರವಿ, ನಿವೃತ್ತ ಶಿಕ್ಷಕ ಕೆ.ಆರ್. ಧರ್ಮಪ್ಪ, ಕೆಂಗುಂಟೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.