
ಹೊಸದುರ್ಗ: ಉಪ್ಪಾರ ಸಮುದಾಯ ಭವನ ನಿರ್ಮಿಸಲು ಈಗಾಗಲೇ ಸ್ಥಳ ಗುರುತಿಸಿದ್ದು, ತಿಂಗಳೊಳಗೆ ₹1.5 ಕೋಟಿ ಬಿಡುಗಡೆ ಮಾಡಲಾಗುವುದು ಶಾಸಕ ಬಿ.ಜಿ. ಗೋವಿಂದಪ್ಪ ಭರವಸೆ ನೀಡಿದರು.
ತಾಲ್ಲೂಕು ಉಪ್ಪಾರ ಸಂಘ, ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸಗರ ನಿವೃತ್ತ ನೌಕರರ ಸಂಘ ಹಾಗೂ ಭಾಗೀರಥಿ ಮಹಿಳಾ ಸಂಘದ ವತಿಯಿಂದ ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಸಮುದಾಯಗಳಲ್ಲೂ ಒಳಜಗಳ ಇದ್ದೇ ಇರುತ್ತದೆ. ಸಮಸ್ಯೆಗಳನ್ನು ಬದಿಗೆ ಸರಿಸಿ, ಸಂಘಟನೆ ಮಾಡಿಕೊಳ್ಳಿ. ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು.
‘ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ. ಎಲ್ಲರನ್ನೂ ಪ್ರೀತಿಸಿ, ಸ್ವಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಷ್ಣುತೆ ಇರಲಿ. ಪ್ರತಿಯೊಬ್ಬರ ಮನೆಯಲ್ಲಿಯೂ ಭಗೀರಥ ಮಹರ್ಷಿ ಹಾಗೂ ಗುರುಗಳ ಭಾವಚಿತ್ರ ಇರಲಿ’ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಆರ್ಶೀವಚನ ನೀಡಿದರು.
ಕಡಿಮೆ ಜನಸಂಖ್ಯೆ ಇರುವ ಸಮುದಾಯಗಳಿಗೆ ಸರ್ಕಾರ ವಿಧಾನ ಪರಿಷತ್‌ನಲ್ಲಿ ಸ್ಥಾನ ನೀಡಬೇಕು. ಆಗ ಮಾತ್ರ ಸಂವಿಧಾನ ಆಶಯ ಈಡೇರಿಸಲು ಸಾಧ್ಯ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.
ದೇಶದಾದ್ಯಂತ ಸಂಚರಿಸಿ, ಉಪ್ಪಾರ ಸಮುದಾಯದವರನ್ನು ಸಂಘಟಿಸುತ್ತಿರುವ ಕೀರ್ತಿ ಭಗೀರಥ ಶ್ರೀಗಳಿಗೆ ಸಲ್ಲುತ್ತದೆ ಎಂದು ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ ಅಭಿಮಾನ ವ್ಯಕ್ತಪಡಿಸಿದರು.
ಭಾಗೀರಥಿ ಮಹಿಳಾ ಸಂಘದ ಉದ್ಘಾಟನೆ ಹಾಗೂ ಉತ್ತಮ ಅಂಕಗಳಿಸಿದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕೆಪಿಸಿಸಿ ಸದಸ್ಯ ಎಂ.ಪಿ. ಶಂಕರ್, ಉಪ್ಪಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಕೆ. ಪರಪ್ಪ, ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಭಾಗೀರಥಿ ಮಹಿಳಾ ಸಂಘದ ಅಧ್ಯಕ್ಷೆ ಭಾಗೀರಥಮ್ಮ ಮರಿಚಿಕ್ಕಣ್ಣ, ಭಗೀರಥ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಎನ್ ಮಲ್ಲಪ್ಪ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ತಿಪ್ಪೇಶಪ್ಪ, ಕೆ.ಪಿ.ಸಿ.ಸಿ ವಕ್ತಾರ ಮಂಜುನಾಥ್, ಲಂಬಾಣಿ ಸಮಾಜದ ಅಧ್ಯಕ್ಷ ಹನುಮನಾಯ್ಕ, ಸಿದ್ದಲಿಂಗಸ್ವಾಮಿ, ನಿರಂಜನಮೂರ್ತಿ, ದಾವಣಗೆರೆ ಮಂಜುನಾಥ್ ಮುಖಂಡರಾದ ಮಂಜುನಾಥ್ ಕೊಂಡಾಪುರ, ಕಾವ್ಯ ತಿಮ್ಮರಾಜು, ಸುಶೀಲಮ್ಮ ನಾಗೇಂದ್ರಯ್ಯ ಸೇರಿದಂತೆ ಎಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.