ADVERTISEMENT

ವಾಣಿವಿಲಾಸ ಜಲಾಶಯ | ನಿಲ್ಲದ ನೀರಿನ ಹರಿವು: ಸಂಕಷ್ಟದಲ್ಲಿ ಕೃಷಿಕರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:53 IST
Last Updated 12 ನವೆಂಬರ್ 2025, 5:53 IST
ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿ ಸಮೀಪ ವಾಣಿವಿಲಾಸ ಬಲನಾಲೆಯ ನೀರು ಹರಿದು ಹೊಲದ ತುಂಬ ನಿಂತಿರುವುದು
ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿ ಸಮೀಪ ವಾಣಿವಿಲಾಸ ಬಲನಾಲೆಯ ನೀರು ಹರಿದು ಹೊಲದ ತುಂಬ ನಿಂತಿರುವುದು   

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಎಡ ಮತ್ತು ಬಲ ನಾಲೆಗಳಲ್ಲಿ ನಿರಂತರವಾಗಿ ನೀರು ಹರಿಯುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ತೋಟ, ಜಮೀನುಗಳಲ್ಲಿ ತೇವಾಂಶ ಹೆಚ್ಚಿ ಹೊಲಗಳು ಜೋಪು ಹತ್ತುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಮೊದಲು ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನಾಲೆಗಳ ಮೂಲಕ ಒಂದು ತಿಂಗಳು ನೀರು ಹರಿಸಿದರೂ ಕೊನೆಯ ಭಾಗಕ್ಕೆ ನೀರು ತಲುಪಿಲ್ಲ ಎಂದು ರೈತರು ಆರೋಪಿಸುತ್ತಿದ್ದರು. ಅ. 19 ರಂದು ವಾಣಿವಿಲಾಸ ಜಲಾಶಯ ಕೋಡಿಬಿದ್ದ ನಂತರ ಹೊಸದುರ್ಗ ತಾಲ್ಲೂಕಿನ ಹಳ್ಳಿಗಳನ್ನು ಮುಳುಗಡೆಯಿಂದ ತಪ್ಪಿಸಲು ಕೋಡಿಯ ಜೊತೆಗೆ ನಾಲೆಗಳಲ್ಲೂ ಅಣೆಕಟ್ಟೆಯ ನೀರನ್ನು ಹೊರಬಿಡಲಾಗುತ್ತಿದೆ. ತೋಟದ ಬೆಳೆ ಹೊರತುಪಡಿಸಿ ಬೇಸಿಗೆ ಹಂಗಾಮಿಗೆ ಶೇಂಗಾ, ಜೋಳ, ರಾಗಿ ಬಿತ್ತನೆ ಮಾಡುತ್ತಿದ್ದ ರೈತರು ನೀರಿನ ನಿರಂತರ ಹರಿವಿನಿಂದ ಕಂಗಾಲಾಗಿದ್ದಾರೆ. ಜಮೀನಿನ ತುಂಬ ನೀರು ನಿಂತಿದ್ದು, ಹೊರ ಹಾಕಲು ಬೇರೆ ದಾರಿ ಇಲ್ಲದೆ ರೈತರು ತಲೆಮೇಲೆ ಕೈಹೊತ್ತು ಕೂತಿದ್ದಾರೆ.

ನಾಲೆಯ ನೀರು ನಿಲ್ಲಿಸಲು ಮನವಿ;

ವಾಣಿವಿಲಾಸ ಬಲನಾಲೆಯ ನೀರು ನುಗ್ಗಿ ತೆಂಗು, ಅಡಿಕೆ ತೋಟಗಳು ಹಾಳಾಗುತ್ತಿವೆ. ನೀರಿನ ರಭಸಕ್ಕೆ ಜಮೀನಿನಲ್ಲಿನ ಮಣ್ಣು ಕೊಚ್ಚಿ ಹೋಗಿದೆ. ಹಾಗಾಗಿ ಬಲನಾಲೆಯಿಂದ ಬಿಡುತ್ತಿರುವ ನೀರನ್ನು ತಕ್ಷಣ ನಿಲ್ಲಿಸುವಂತೆ ಕೂಡ್ಲಹಳ್ಳಿ ಗ್ರಾಮಸ್ಥರು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ADVERTISEMENT

ನಾಲೆ ಬಂದ್ ಮಾಡಲು ಗ್ರಾಮಸ್ಥರ ಅಡ್ಡಿ;

ವಾಣಿವಿಲಾಸ ಅಣೆಕಟ್ಟೆಯಿಂದ ಹರಿದು ಬರುವ ನೀರು ಕಾತ್ರಿಕೇನಹಳ್ಳಿ ಸಮೀಪ ಬಲ ಮತ್ತು ಎಡನಾಲೆಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ಹರಿದು ಹೋಗುತ್ತದೆ. ಹೆಚ್ಚುವರಿ ನೀರು ವೇದಾವತಿ ನದಿಯ ಮೂಲಕ ಸಾಗುತ್ತದೆ. ಅಣೆಕಟ್ಟೆಯ ಕೆಳಭಾಗದಲ್ಲಿ ಹೆಚ್ಚಿನ ಮಳೆಯಾದರೆ, ಕೋಡಿಯಲ್ಲಿ ಹೆಚ್ಚು ನೀರು ಹರಿದು ಬಂದರೆ ಕಾತ್ರಿಕೇನಹಳ್ಳಿಯ ಮಕ್ಕಳು ನದಿಯ ಆಚೆ ಇರುವ ಶಾಲೆ ಹಾಗೂ ರೈತರು ಜಮೀನು, ತೋಟಗಳಿಗೆ ಹೋಗಿ ಬರಲು ಅಡ್ಡಿಯಾಗುತ್ತಿರುವ ಕಾರಣ ನಾಲೆಯ ತೂಬು ಹಾಕುವುದಕ್ಕೆ ಅಡ್ಡಿ ಪಡಿಸುತ್ತಿದ್ದಾರೆ.

ಪೊಲೀಸ್ ರಕ್ಷಣೆಗೆ ಮನವಿ;

ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿರುವ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಕೂಡ್ಲಹಳ್ಳಿ ಗ್ರಾಮಸ್ಥರು ಸಲ್ಲಿಸಿರುವ ಮನವಿಯನ್ನು ಆಧರಿಸಿ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದು, ನಾಲೆಗಳಲ್ಲಿ ನೀರು ಹರಿಯುತ್ತಿರುವ ಕಾರಣದಿಂದ ಕೂಡ್ಲಹಳ್ಳಿ, ಸಮುದ್ರದಹಳ್ಳಿ, ಆರನಕಟ್ಟೆ, ಶಿವಪುರ, ಕುಂದಲಗುರ, ಶಿವನಗರ, ದೊಡ್ಡಕಟ್ಟೆ, ಟಿ. ನಾಗೇನಹಳ್ಳಿಯ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗಿದ್ದು, ಕಾತ್ರಿಕೇನಹಳ್ಳಿ ಸಮೀಪ ವಾಣಿವಿಲಾಸ ಅಣೆಕಟ್ಟೆಯ ಎಡ ಮತ್ತು ಬಲನಾಲೆಗಳ ತೂಬುಗಳನ್ನು ಮುಚ್ಚಲು ಸೂಕ್ತ ರಕ್ಷಣೆ ನೀಡುವಂತೆ ಕೋರಿದ್ದಾರೆ.

ಅಡಕತ್ತರಿಯಲ್ಲಿ ಅಧಿಕಾರಿಗಳು

ವಾಣಿವಿಲಾಸ ಜಲಾಶಯ ಕೋಡಿ ಬಿದ್ದಾಗಿನ ಸಂಭ್ರಮ ಈಗ ಉಳಿದಿಲ್ಲ ಎಂಬುದಕ್ಕೆ ಪ್ರಸ್ತುತ ನಡೆಯುತ್ತಿರುವ ಘಟನಾವಳಿಗಳು ಸಾಕ್ಷಿಯಾಗಿವೆ.

ಅಣೆಕಟ್ಟೆಯ ನೀರನ್ನು 130 ಅಡಿಗೆ ಕಾಯ್ದುಕೊಳ್ಳುವ ಮೂಲಕ ಹೊಸದುರ್ಗ ತಾಲ್ಲೂಕಿನಲ್ಲಿ ಹಿನ್ನೀರು ಪ್ರದೇಶದ ರೈತರ ಹಿತ ಕಾಯಬೇಕು ಎಂಬುದು ಒಂದು ಕಡೆಯ ಒತ್ತಡ. ‘ಹೆಚ್ಚುವರಿ ನೀರು ಕೋಡಿಯಲ್ಲಿ ಬೇಕಾದರೆ ಹರಿದು ಹೋಗಲಿ, ನಾಲೆಗಳ ಮೂಲಕ ಹರಿಸುವುದು ಬೇಡ’ ಎಂಬುದು ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರ ಆಗ್ರಹ.

‘ನಾಲೆಗಳ ತೂಬು ಹಾಕಿದರೆ ನಮ್ಮ ಮಕ್ಕಳು ಎಂಟತ್ತು ಕಿ.ಮೀ. ಸುತ್ತಿ ಶಾಲೆಗೆ ಹೋಗಬೇಕು. ರೈತರು ಜಮೀನುಗಳಿಗೆ ಹೋಗುವುದನ್ನೇ ನಿಲ್ಲಿಸಬೇಕು. ಮೊದಲು ಇಲ್ಲೊಂದು ಸೇತುವೆ ನಿರ್ಮಿಸಿ ನಂತರ ಏನಾದರೂ ಮಾಡಿಕೊಳ್ಳಿ’ ಎಂಬುದು ಕಾತ್ರಿಕೇನಹಳ್ಳಿಯವರ ಬೇಡಿಕೆ. ಇದೆಲ್ಲದರ ನಡುವೆ ನೀರಾವರಿ ನಿಗಮದವರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಸೇತುವೆ ನಿರ್ಮಾಣ; ಶಾಶ್ವತ ಪರಿಹಾರ
ಕಾತ್ರಿಕೇನಹಳ್ಳಿ ಸಮೀಪ ಹರಿಯುವ ವೇದಾವತಿ ನದಿ ವಿಚಾರದಲ್ಲಿ ಸಮಸ್ಯೆಯ ಗೋಜಲು ಇದೆ. ನಾಲೆಗಳ ತೂಬು ಹಾಕಿದರೆ ಗ್ರಾಮಸ್ಥರು, ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗುತ್ತದೆ. ತೂಬು ಹಾಕದಿದ್ದರೆ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳು ಜೋಪು ಹತ್ತುತ್ತವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ವೇದಾವತಿ ನದಿಗೆ ಸೇತುವೆ ನಿರ್ಮಿಸುವ ಕುರಿತು ವಿಸ್ತೃತ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಕಳಿಸಲಾಗಿದೆ. ಸೇತುವೆ ನಿರ್ಮಾಣಗೊಂಡರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು   ವಿಶ್ವೇಶ್ವರಯ್ಯ ನೀರಾವರಿ ನಿಗಮದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಜಯಕುಮಾರ್ ತಿಳಿಸಿದರು.