
ಹೊಸದುರ್ಗ: ವಿ.ವಿ ಸಾಗರದ ಜಲಾಶಯದ ಮಟ್ಟ ಅಧಿಕವಾಗುತ್ತಿದ್ದು, ತಾಲ್ಲೂಕಿನ ರಸ್ತೆ, ಶಾಲೆ, ಸಂಪರ್ಕ ಸೇತುವೆ, ಮನೆ ಹಾಗೂ ಜಮೀನುಗಳು ಜಲಾವೃತಗೊಂಡಿವೆ. ಈ ಭಾಗದ ಜನರ ಸಂಕಷ್ಟ ಹೇಳತೀರದು.
ಶಾಲೆ ಮುಳುಗಡೆ: ತಾಲ್ಲೂಕಿನ ಅತ್ತಿಮಗ್ಗೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಜಲಾವೃತಗೊಂಡಿದೆ. ಶಾಸಕರು, ತಾಲ್ಲೂಕು ಪಂಚಾಯಿತಿ ಇಒ ಜೊತೆಗೆ ಸ್ಥಳ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಹತ್ತಿರದ ಗ್ರಂಥಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಮಲದೊರೆ ಸಂಪರ್ಕ ಸೇತುವೆ ಜಲಾವೃತ: ತಾಲ್ಲೂಕಿನ ಮತ್ತೋಡು ಹೋಬಳಿಯ ಮಲದೊರೆ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಗುರುವಾರದಿಂದ ಸ್ವಲ್ಪ ಇದ್ದ ನೀರಿನ ಮಟ್ಟ, ಶುಕ್ರವಾರ 2 ಅಡಿ ಅಧಿಕವಾಗಿದೆ. ನೀರಿನ ಮಟ್ಟ ಜಾಸ್ತಿಯಾದ ಪರಿಣಾಮ ಈ ಮಾರ್ಗವಾಗಿ ಸಂಪರ್ಕ ಕಡಿತಗೊಳಿಸಲಾಗಿದೆ. ಹ್ಯಾಂಡ್‌ಪೋಸ್ಟ್, ಹಾಗಲಕೆರೆ, ಮೆಣಸಿನಡು, ಕಾರೇಹಳ್ಳಿ, ಮತ್ತೋಡು ಭಾಗದ ಸಂಪರ್ಕ ಕಡಿತಗೊಂಡಿದೆ.
ಹಿನ್ನೀರಿನ ಪ್ರದೇಶದ ಅತ್ತಿಮಗ್ಗೆ ಗ್ರಾಮಕ್ಕೆ ಶುಕ್ರವಾರ ಶಾಸಕ ಬಿ.ಜಿ.ಗೋವಿಂದಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
‘ಜಮೀನುಗಳಲ್ಲಿದ್ದ ಅಡಿಕೆ, ತೆಂಗು, ಬಾಳೆ ಸೇರಿ ಎಲ್ಲ ಬೆಳೆಗಳೂ ಜಲಾವೃತಗೊಂಡಿವೆ. ಕುಡಿಯುವ ನೀರಿನ ಟ್ಯಾಂಕರ್‌ಗಳು ಹಿನ್ನೀರಿನಿಂದ ಆವರಿಸಿವೆ, ಮೋಟಾರ್ ಆರಂಭಿಸಲು ಬರುತ್ತಿಲ್ಲ. ಕಲುಷಿತ ನೀರು ಬರುತ್ತಿದೆ. ಕುಡಿಯಲು, ಅಡುಗೆ ಮಾಡಲು ಶುದ್ಧವಾದ ನೀರು ಸಿಗುತ್ತಿಲ್ಲ. ತೇವಾಂಶ ಅಧಿಕವಾಗಿರುವ ಕಾರಣ ಶೌಚಾಲಯದ ಕೊಠಡಿಗಳು ಬೀಳುವಂತಿವೆ. ಮಹಿಳೆಯರು ಹಾಗೂ ಪುರುಷರು ಬಯಲಿನಲ್ಲೇ ಶೌಚ ಮಾಡುವಂತಾಗಿದೆ. ಮನೆಯ ಸುತ್ತಲೂ ತೇವಾಂಶ ಅಧಿಕವಾಗಿರುವ ಕಾರಣ ಮಹಿಳೆ, ಮಕ್ಕಳು ಮತ್ತು ವೃದ್ಧರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಹಾವು, ಚೇಳು ಸೇರಿ ಇತರೆ ವಿಷಜಂತುಗಳ ಹಾವಳಿ ಎದುರಾಗಿದೆ. ಜೀವ ಭಯದಿಂದಲೇ ಬದುಕು ನಡೆಸುವಂತಾಗಿದೆ’ ಎಂದು ಅತ್ತಿಮಗ್ಗೆ ಗ್ರಾಮದ ಈಶ್ವರ್ ನೋವು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.