
ಮಂಗಳೂರು: ಭರತನಾಟ್ಯ ಕಲಿಯುವುದರಿಂದ ಮಕ್ಕಳ ವ್ಯಕ್ತಿತ್ವದಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತದೆ. ಕಲೆಗೆ ಅಂಥ ಶಕ್ತಿ ಇದೆ. ಡಿಜಿಟಲ್ ಯುಗದಲ್ಲಿ ಮಕ್ಕಳು ಇಂತಹ ಕಲಾಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಹೇಳಿದರು.
ಸನಾತನ ನಾಟ್ಯಾಲಯ ಈಚೆಗೆ ನಗರದಲ್ಲಿ ಆಯೋಜಿಸಿದ್ದ ನೃತ್ಯಗುರು ಶಾರದಾಮಣಿ ಶೇಖರ್ ಅವರ ಗುರುನಮನ ‘ವಂದೇ ಗುರುಪರಂಪರಾಮ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭರತನಾಟ್ಯ ಕಲಿತರೆ ಕಲೆಯನ್ನು ಕರಗತ ಮಾಡಿಕೊಳ್ಳುವುದರ ಜೊತೆಯಲ್ಲಿ ಗುರುಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನೂ ರೂಢಿಸಿಕೊಳ್ಳಬಹುದು’ ಎಂದು ಅವರು ಹೇಳಿದರು.
ಶಾರದಾಮಣಿ ಶೇಖರ್ ಬಳಿ ಶಿಷ್ಯಂದಿರಾಗಿ ನೃತ್ಯ ಕಲಿತು ರಾಜ್ಯ ಮತ್ತು ದೇಶದ ವಿವಿದ ಕಡೆಗಳಲ್ಲಿ ನೃತ್ಯ ತರಗತಿ ನಡೆಸುತ್ತಿರುವ ಗುರುಗಳು ಭರತನಾಟ್ಯ ಪ್ರದರ್ಶನ ನೀಡಿ, ಗುರುಪರಂಪರೆಯಲ್ಲಿ ತಮ್ಮ ವ್ಯಕ್ತಿತ್ವ ಅರಳಿದ ಬಗೆಯನ್ನು ವಿವರಿಸಿದರು. ವಿದುಷಿ ಶಾರದಾಮಣಿ ಶೇಖರ್ ಉದ್ಘಾಟಿಸಿದರು.
ಸುಮಂಗಲಾ ರತ್ನಾಕರ್, ಭಾರತೀ ಸುರೇಶ್, ಶ್ರೀಲತಾ ನಾಗರಾಜ್, ಸುಮನ್‌ರಾಜ್ ಬಾಂದೇಕರ್, ಪ್ರಮೋದ್ ಉಳ್ಳಾಲ್, ರೋಹಿಣಿ ಉದಯ್, ಉಮಾ ವಿಷ್ಣು ಹೆಬ್ಬಾರ್, ರಾಧಿಕಾ ಶೆಟ್ಟಿ, ಸೀಮಾ ಪ್ರಶಾಂತ್, ಮಂಜುಳಾ ಸುಬ್ರಹ್ಮಣ್ಯ, ಪೂಜಾ ಸಚಿನ್, ಸುಧೀರ್‌ಪಿ, ಗೌರಿ ಶೈಲೇಶ್, ಸ್ವರ್ಣಗೌರಿ ಜೋಷಿ, ವಾಣಿಶ್ರೀ ವಿ, ಪ್ರತಿಭಾ ಎ. ಕುಮಾರ್, ಸ್ವರ್ಣ ಪ್ರತೀಕ, ಶ್ರವಣ ಕುಮಾರಿ, ಅಂಕಿತಾ ನೃತ್ಯ ಪ್ರದರ್ಶನ ನೀಡಿದರು. ನಟ್ಟುವಾಂಗದಲ್ಲಿ ಪುತ್ತೂರಿನ ವಿದ್ವಾನ್ ಮಂಜುನಾಥ್, ಹಾಡುಗಾರಿಕೆಯಲ್ಲಿ ವಿನೀತ್ ಪುರವಂಕರ, ಮೃದಂಗದಲ್ಲಿ ಗೀತೇಶ್ ನೀಲೇಶ್ವರ, ಕೊಳಲಿನಲ್ಲಿ ಮುರಳೀಧರ್ ಕೆ.ಉಡುಪಿ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.