ಮಂಗಳೂರು: ಗ್ರಾಹಕರೊಬ್ಬರು ಚಿನ್ನದ್ದೆಂದು ನಂಬಿಸಿ, ನಕಲಿ ಆಭರಣ ಅಡವಿಟ್ಟು ₹ 3.36 ಲಕ್ಷ ಸಾಲ ಪಡೆದು ವಂಚಿಸಿದ ಬಗ್ಗೆ ಶ್ರೀಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕಿನ ಸುರತ್ಕಲ್ ಶಾಖೆಯ ವ್ಯವಸ್ಥಾಪಕರು ದೂರು ನೀಡಿದ್ದು, ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನಮ್ಮ ಬ್ಯಾಂಕಿನ ಗ್ರಾಹಕ ಗುರುಪುರ ಅಡ್ಡೂರಿನ ಮೊಹಮ್ಮದ್ ಆಸೀಫ್ ಜೂನ್ 23ರಂದು (ಸೋಮವಾರ) 15.5 ಗ್ರಾಂ ತೂಕದ ಒಂದು ಜೊತೆ ಬಳೆಯನ್ನು ಅಡವಿಟ್ಟು ₹ 92 ಸಾವಿರ ಹಾಗೂ 41.800 ಗ್ರಾಂ ತೂಕದ ಒಂದು ಜೊತೆ ಕಾಲುಗೆಜ್ಜೆ, 41 ಗ್ರಾಂ ತೂಕದ ಒಂದು ಎಳೆ ಸರಗಳನ್ನು ಅಡವಿಟ್ಟು ₹ 2.44 ಲಕ್ಷ ಸೇರಿದಂತೆ ಒಟ್ಟು ₹ 3.36 ಲಕ್ಷ ಸಾಲ ಪಡೆದಿದ್ದರು. ಈ ಚಿನ್ನಾಭರಣಗಳನ್ನು ಸಂಸ್ಥೆಯ ಅಧಿಕೃತ ಚಿನ್ನಾಭರಣ ಪರಿಶೋಧಕ ಭಾಸ್ಕರ ಆಚಾರಿಯವರು ಪರಿಶೀಲಿಸಿದ್ದು, ಅವುಗಳು ಅಸಲಿ ಚಿನ್ನಾಭರಣಗಳೆಂದು ದೃಢೀಕರಿಸಿದ್ದರು. ಸಾಲ ಮಂಜೂರಾದ ಬಳಿಕ ಚಿನ್ನಾಭರಣ ಅಸಲಿಯತ್ತಿನ ಬಗ್ಗೆ ಅನುಮಾನ ಬಂದಿದ್ದರಿಂದ ಭಾಸ್ಕರ ಆಚಾರಿಯವರು ಅವುಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿದ್ದರು. ಆಗ ಅವು ನಕಲಿ ಎಂದು ಗೊತ್ತಾಗಿತ್ತು ಎಂಬುದಾಗಿ ಬ್ಯಾಂಕಿನ ವ್ಯವಸ್ಥಾಪಕರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.