ADVERTISEMENT

‘‌ಕೇಂದ್ರದ ಪೂರ್ಣಪ್ರಮಾಣ ಬೆಂಬಲ ಇಲ್ಲ’

ಮಂಗಳೂರು ಮೀನುಗಾರಿಕೆ ಬಂದರು ಆಧುನೀಕರಣ, ಧಕ್ಕೆಯ 3ನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 4:58 IST
Last Updated 7 ಡಿಸೆಂಬರ್ 2025, 4:58 IST
ಮಂಗಳೂರು ಮೀನುಗಾರಿಕೆ ಬಂದರು ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆ ಮಾಡಿದ ಮೀನುಗಾರಿಕೆ ಸಚಿವಮಾಂಕಾಳ ವೈದ್ಯ ಅವರಲ್ಲಿ ಮೀನುಗಾರ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಂಡರು ಪ್ರಜಾವಾಣಿ ಚಿತ್ರ
ಮಂಗಳೂರು ಮೀನುಗಾರಿಕೆ ಬಂದರು ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆ ಮಾಡಿದ ಮೀನುಗಾರಿಕೆ ಸಚಿವಮಾಂಕಾಳ ವೈದ್ಯ ಅವರಲ್ಲಿ ಮೀನುಗಾರ ಮಹಿಳೆಯೊಬ್ಬರು ಸಮಸ್ಯೆ ಹೇಳಿಕೊಂಡರು ಪ್ರಜಾವಾಣಿ ಚಿತ್ರ   

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಸಮುದ್ರ ಮೀನುಗಾರಿಕೆ ಅಭಿವೃದ್ಧಿ ಮತ್ತು ಮೀನುಗಾರರಿಗೆ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ ಕೇಂದ್ರ ಸರ್ಕಾರದ ಪೂರ್ಣ ಬೆಂಬಲ ಸಿಗುತ್ತಿಲ್ಲ. ನೆರವಿನ ಹಸ್ತ ಚಾಚಲು ಕೇಂದ್ರ ಮುಂದಾಗಬೇಕು ಎಂದು ಮೀನುಗಾರಿಕೆ ಸಚಿವ ಮಕಾಳ ಎಸ್‌. ವೈದ್ಯ ಆಗ್ರಹಿಸಿದರು.

ಮಂಗಳೂರು ಮೀನುಗಾರಿಕೆ ಬಂದರ್‌ ಆಧುನೀಕರಣ ಮತ್ತು ಧಕ್ಕೆಯ 3ನೇ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬಂದರು ಮತ್ತು ಮೀನುಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾಪಕ್ಕೆ ಪೂರ್ಣ ಬೆಂಬಲ ಸಿಗಲಿಲ್ಲ ಎಂದು ದೂರಿದರು. 

ಸಬ್ಸಿಡಿ ದರದಲ್ಲಿ ಬೋಟ್‌ಗಳಿಗೆ ನೀಡುವ ಡೀಸೆಲ್ ಪ್ರಮಾಣ 1.5 ಕೆಎಲ್‌ ಇತ್ತು. ಈಗ 2 ಲಕ್ಷ ಕೆಎಲ್‌ ಡೀಸೆಲ್ ಕೊಡಲಾಗುತ್ತದೆ. ಅದಕ್ಕೆ ರಾಜ್ಯ ಸರ್ಕಾರದ ಕಡೆಯಿಂದ ಎಲ್ಲ ಬಗೆಯ ತೆರಿಗೆ ರಿಯಾಯಿತಿ ನೀಡಲಾಗುತ್ತದೆ. ಕೇಂದ್ರವೂ ತೆರಿಗೆ ವಿನಾಯಿತಿಗೆ ಮುಂದಾಗಬೇಕು. ಮೀನುಗಾರಿಕೆಗಾಗಿಯೇ ಪ್ರತ್ಯೇಕವಾಗಿ ಸೀಮೆಎಣ್ಣೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಕೈಗಾರಿಕೆಗಳಲ್ಲಿ ಬಳಸುವ ಎಣ್ಣೆಯನ್ನು ಖರೀದಿಸಿ ಮೀನುಗಾರರಿಗೆ ರಾಜ್ಯ ಸರ್ಕಾರ ನೀಡುತ್ತದೆ ಎಂದು ಸಚಿವರು ಹೇಳಿದರು. 

ADVERTISEMENT

ಮೀನುಗಾರಿಕೆಯ ಸಂದರ್ಭದಲ್ಲಿ ಸಾವಿಗೀಡಾದರೆ ಕುಟುಂಬದವರಿಗೆ ₹ 10 ಲಕ್ಷ ಪರಿಹಾರ ಧವನ್ನು 24 ತಾಸುಗಳ ಒಳಗೆ ಕೊಡಲಾಗುತ್ತದೆ. ಗಾಯಗೊಂಡವರ ಆಸ್ಪತ್ರೆ ವೆಚ್ಚವನ್ನೂ ಭರಿಸಲಾಗುತ್ತದೆ. ಕೈಕಾಲು ಕಳೆದುಕೊಂಡರೆ ಬದುಕಿಗೆ ಆಸರೆ ಒದಗಿಸಲಾಗುತ್ತದೆ. ದೇಶದ 16 ರಾಜ್ಯಗಳಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ. ಎಲ್ಲ ನಿಯಮಗಳನ್ನು ಎಲ್ಲ ಕಡೆಯಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಆದ್ದರಿಂದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸ್ವಲ್ಪ ಉದಾರಿಗಳಾಗಬೇಕು ಎಂದರು. 

ಕರ್ನಾಟಕದ ಮೀನುಗಾರರು 343 ಕಿಲೊಮೀಟರ್ ಉದ್ದದ ಕರಾವಳಿಯನ್ನು ಕಾಯುವ ಸೈನಿಕರು. ಆದರೆ ಅವರ ಅಗತ್ಯಗಳಿಗೆ ಸ್ಪಂದಿಸುವ ಯೋಜನೆಗಳು ಇನ್ನೂ ಜಾರಿಯಾಗಲಿಲ್ಲ ಎಂದು ಸಚಿವರು ಹೇಳಿದರು. ಈಗ ಬೋಟ್ ನಿರ್ಮಾಣಕ್ಕೆ ಪ್ರಮಾಣ ಪತ್ರವನ್ನು 15 ದಿನಗಳ ಒಳಗೆ ಬೇಷರತ್ತಾಗಿ ನೀಡಲಾಗುತ್ತದೆ. ಆಧುನೀಕರಣ ಯೋಜನೆಯಲ್ಲಿ ಕುಡಿಯುವ ನೀರಿನ ಸೌಲಭ್ಯ, ಒಳಚರಂಡಿ ಮತ್ತು ಜೆಟ್ಟಿ ಒಳಗೊಂಡಿದೆ ಎಂದು ಅವರು ತಿಳಿಸಿದರು. 

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಲ್ಲಿ ಮೀನುಗಾರಿಕೆ ಸಂದರ್ಭದಲ್ಲಿ ಆಮೆಗಳು ಬಲೆಗೆ ಬೀಳದಂತೆ ಮಾಡುವ ಉಪಕರಣಗಳನ್ನು (ಟಿಇಡಿ) ವಿತರಿಸಲಾಗಿದ್ದು 12 ಸ್ಥಳಗಳಲ್ಲಿ ಕೃತಕ ರೀಫ್‌ಗಳನ್ನು ಅಳವಡಿಸಲಾಗುತ್ತಿದೆ. ಸಿಆರ್‌ಝಡ್‌ನಿಂದ ಅನುಮತಿ ಸಿಗದ ಕಾರಣ ಕೆಲವು ಯೋಜನೆಗಳು ಕಾರ್ಯಗತವಾಗದೇ ಉಳಿದಿವೆ ಎಂದು ಹೇಳಿದರು.

ಮೆರಿಟೈಮ್ ಮಂಡಳಿಯನ್ನು ಬಲಪಡಿಸಬೇಕಾದ ಅಗತ್ಯವಿದೆ. 177 ಐಸ್‌ ಘಟಕಗಳ ನಿರ್ಮಾಣಕ್ಕೆ ಕೇಂದ್ರದಿಂದ ₹ 134 ಕೋಟಿ ಅನುದಾನ ಬಿಡುಗಡೆಯಾಗಿದೆ. ಕರಾವಳಿಯಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸಬೇಕು. ಇಲ್ಲವಾದರೆ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗದೇ ಉಳಿಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.  

ಮಂಗಳೂರು ಮೀನುಗಾರಿಕೆ ಬಂದರಿನ ಆಧುನೀಕರಣ ಕಾಮಗಾರಿಗೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಶಂಕುಸ್ಥಾಪನೆ ಮಾಡಿದರು. ವೇದವ್ಯಾಸ ಕಾಮತ್ ಎಂ.ಎ. ಗಫೂರ್ ದಿನೇಶ್ ಕುಮಾರ್ ಕಳ್ಳೇರ್ ಮೋಹನ್ ಬೆಂಗ್ರೆ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ
ಮಂಗಳೂರು ಮೀನುಗಾರಿಕೆ ಬಂದರು ಆಧುನೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಮೀನುಗಾರಿಕೆ ಸಚಿವಮಂಕಾಳ ವೈದ್ಯ ಮೀನುಗಾರ ಮುಖಂಡರೊಂದಿಗೆ ಮಾತನಾಡಿದರು. ಚೇತನ್ ಬೆಂಗ್ರೆ ಎಂ.ಎ ಗಫೂರ್ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ

ಬಿಜೆಪಿ ಅವಧಿಯಲ್ಲೂ ಸಮಸ್ಯೆ: ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಅಭಿವೃದ್ಧಿ ವಿಷಯದಲ್ಲಿ ಪಕ್ಷಗಳನ್ನು ಬದಿಗಿರಿಸಬೇಕು. ಕರ್ನಾಟಕದ ಕರಾವಳಿಯಲ್ಲಿ ನಗರ ಪ್ರದೇಶದಲ್ಲಿ ಮೀನುಗಾರಿಕೆ ಜೆಟ್ಟಿ ಇರುವುದು ಮಂಗಳೂರಿನಲ್ಲಿ ಮಾತ್ರ. ಇಲ್ಲಿ ಜಾಗದ ಬೆಲೆ ವಿಪರೀತವಿದೆ. ಬಾಡಿಗೆಯೂ ಹೆಚ್ಚು. ಇದಕ್ಕೆ ಪರಿಹಾರ ಕಾಣುವ ಕೆಲಸ ಬಿಜೆಪಿ ಸರ್ಕಾರದ ಅವಧಿಯಲ್ಲೂ ಆಗಲಿಲ್ಲ. ಆದ್ದರಿಂದ ನಾವೀಗ ವಿರೋಧ ಪಕ್ಷದಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.  ಸಚಿವ ಮಂಕಾಳ ವೈದ್ಯರನ್ನು ಉದ್ದೇಶಿಸಿ ನೀವು ಮುಂದಿನ ಬಾರಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಗುವುದು ಬೇಡ. ಸೀ ಬೋಟ್ ಸೌಲಭ್ಯಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಬರಲಿಲ್ಲ. ಸಿದ್ದರಾಮಯ್ಯ ಮುಂದಿನ ಬಾರಿ ಬಜೆಟ್ ಮಂಡಿಸುವುದಕ್ಕಿಂತ ಮೊದಲಾದರೂ ಸೀ ಬೋಟ್‌ಗಳು ಬರಲಿ ಎಂದು ಹೇಳಿದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಟ್ರಾಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್ ಮತ್ತು ಜಂಟಿ ನಿರ್ದೇಶಕ ಸಿದ್ದಯ್ಯ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.