ADVERTISEMENT

ಡೇಟಾ ಸೆಂಟರ್ ಹಬ್: ಸಾಧ್ಯತೆ ಪರಿಶೀಲನೆ

ಐಟಿ ಕ್ಷೇತ್ರದ ಪ್ರಮುಖರೊಂದಿಗೆ ಐಟಿ ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್. ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:39 IST
Last Updated 1 ನವೆಂಬರ್ 2025, 5:39 IST

ಮಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಮಂಗಳೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮೂಲಕ ಡೇಟಾ ಸೆಂಟರ್ ಹಬ್ ಪ್ರಾರಂಭಿಸುವ ಪ್ರಸ್ತಾಪ ಬಂದಿದ್ದು, ಈ ಸಂಬಂಧ ಸಾಧ್ಯತಾ ವರದಿ ಸಿದ್ಧಪಡಿಸಲು ಯೋಚಿಸಲಾಗಿದೆ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್. ಹೇಳಿದರು.

ಶುಕ್ರವಾರ ಇಲ್ಲಿ ಐಟಿ ಕ್ಷೇತ್ರದ ಪ್ರಮುಖರೊಂದಿಗೆ ಸಭೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಡೇಟಾ ಸೆಂಟರ್ ಪ್ರಾರಂಭಿಸುವ ಪೂರ್ವದಲ್ಲಿ ನಿರಂತರ ವಿದ್ಯುತ್, ಉತ್ತಮ ಇಂಟರ್‌ನೆಟ್, ಡೇಟಾ ಸಂಗ್ರಹ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳ ಬಗ್ಗೆ ಅಧ್ಯಯನ ನಡೆಸಬೇಕಾಗುತ್ತದೆ ಎಂದರು.

ಸೆಂಟರ್ ಆಫ್ ಎಕ್ಸ್‌ಲೆನ್ಸ್ ಅನ್ನು ಕೂಡ ಸ್ಥಳೀಯವಾಗಿ ಮಾಡಿದರೆ, ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಸುಲಭವಾಗುತ್ತದೆ. ಐಟಿ ಕ್ಷೇತ್ರದ ಪ್ರಮುಖರೊಂದಿಗೆ ನಡೆಸಿದ ಮಾತುಕತೆಯಲ್ಲಿ ಈ ಎರಡು ಅಂಶಗಳು ಪ್ರಮುಖವಾಗಿ ಚರ್ಚೆಯಾಗಿವೆ ಎಂದು ಹೇಳಿದರು.

ADVERTISEMENT

ಬೆಂಗಳೂರು ಕೇಂದ್ರಿತವಾಗಿರುವ ಐಟಿ ಕ್ಷೇತ್ರವನ್ನು ರಾಜ್ಯದ ಬೇರೆ ನಗರಗಳಲ್ಲಿ ವಿಸ್ತರಿಸಲು ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ಐಟಿ ಬೆಳವಣಿಗೆಗೆ ಪೂರಕ ವಾತಾವರಣ ಇದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತಿವರ್ಷ 10 ಸಾವಿರ ಎಂಜಿನಿಯರಿಂಗ್ ಪದವೀಧರರು, 35 ಸಾವಿರ ಉಳಿದ ಪದವೀಧರರು ಹೊರ ಹೊಮ್ಮುತ್ತಾರೆ. ಉದ್ಯೋಗ ಅರಸಿ ಹೊರ ಹೋಗುವವರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ ಕುಮಾರ್ ಗುಪ್ತ ಮಾತನಾಡಿ, ‘ಮೂರುವರೆ ವರ್ಷಗಳಲ್ಲಿ ಈ ಭಾಗದಲ್ಲಿ 35 ಐಟಿ ಕಂಪನಿಗಳು ಕೆಲಸ ಪ್ರಾರಂಭಿಸಿವೆ. ಕರಾವಳಿಯಲ್ಲಿ ಐಟಿ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಇದೆ’ ಎಂದರು.

ರೊಬೊಸಾಫ್ಟ್ ಕಂಪನಿ ಸ್ಥಾಪಕ ರೋಹಿತ್ ಭಟ್ ಮಾತನಾಡಿ, ಕರಾವಳಿಯಲ್ಲಿ ಎರಡು ವರ್ಷಗಳಲ್ಲಿ ಐಟಿ ಕ್ಷೇತ್ರದಲ್ಲಿ 8 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.