ADVERTISEMENT

ಕಲ್ಲಡ್ಕ: ಮೇಲ್ಸೇತುವೆ ಎರಡೂ ಬದಿ ಸಂಚಾರ ಮುಕ್ತ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 13:15 IST
Last Updated 29 ಜೂನ್ 2025, 13:15 IST
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟೀಯ ಹೆದ್ದಾರಿ ಮೇಲ್ಸೇತುವೆಯ ಎರಡೂ ಬದಿ ವಾಹನ ಸಂಚಾರ ಆರಂಭಗೊಂಡಿದೆ
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟೀಯ ಹೆದ್ದಾರಿ ಮೇಲ್ಸೇತುವೆಯ ಎರಡೂ ಬದಿ ವಾಹನ ಸಂಚಾರ ಆರಂಭಗೊಂಡಿದೆ   

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದೀಗ ಕಲ್ಲಡ್ಕ ಮೇಲ್ಸೇತುವೆಯ ಎರಡೂ ಬದಿ ವಾಹನ ಸಂಚಾರ ಆರಂಭಗೊಂಡಿದೆ.

ಜೂನ್‌ 2ರಂದು ಮೇಲ್ಸೇತುವೆಯ ಒಂದು ಬದಿ ಮಾತ್ರ ವಾಹನ ಸಂಚಾರಕ್ಕೆ ತೆರೆದುಕೊಂಡಿತ್ತು. ಇದೀಗ ಇನ್ನೊಂದು ಬದಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. 5 ದಿನಗಳಿಂದ ಮೇಲ್ಸೇತುವೆ ಮೇಲಿನ ಎರಡೂ ರಸ್ತೆಯಲ್ಲಿ ಸರಾಗವಾಗಿ ವಾಹನ ಸಂಚರಿಸುತ್ತಿವೆ. ಬಿ.ಸಿ.ರೋಡ್ - ಅಡ್ಡಹೊಳೆ ವರೆಗೆ 64 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ 2017ರಲ್ಲಿ ಎಲ್ಆಂಡ್‌ಟಿ ಕಂಪನಿ ₹ 821 ಕೋಟಿ ಮೊತ್ತಕ್ಕೆ ಗುತ್ತಿಗೆ ವಹಿಸಿ ಕೊಂಡಿತ್ತು. ಆ ಬಳಿಕ ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬಗೊಂಡು ಬಳಿಕ ಅರ್ಧದಲ್ಲೇ ಸ್ಥಗಿತಗೊಂಡಿತು. 2021ರಲ್ಲಿ 64 ಕಿ.ಮೀ. ಉದ್ದದ ಹೆದ್ದಾರಿ ಪೈಕಿ 49 ಕಿ.ಮೀ ಮತ್ತು 15 ಕಿ.ಮೀ. ಎಂದು ವಿಭಾಗಿಸಿ ಕೆಎನ್ಆರ್‌ ಕನ್‌ಸ್ಟ್ರಕ್ಷನ್ಸ್‌ ಹೈದರಾಬಾದ್ ಮತ್ತು ಎಂ.ಔತಡೆ ಪ್ರೈ. ಲಿ. ಮಹಾರಾಷ್ಟ್ರ ಕಂಪನಿಗಳಿಗೆ ಗುತ್ತಿಗೆ ನೀಡಿದ ಬಳಿಕ ಕಾಮಗಾರಿಗೆ ವೇಗ ಸಿಕ್ಕಿತ್ತು.

ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿ ಬಳಿ ಅಂಡರ್ ಪಾಸ್ ಮತ್ತು ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಿತ್ತು. ಕಲ್ಲಡ್ಕದ ಪೂರ್ಲಿಪ್ಪಾಡಿಯಿಂದ ಕೃಷ್ಣ ಕೋಡಿ ವರೆಗೆ ₹ 2.1 ಕಿ.ಮೀ. ಉದ್ದದ ಈ ಮೇಲ್ಸೇತುವೆಯಲ್ಲಿ 70 ಪಿಲ್ಲರ್‌ಗಳಿವೆ. ಈ ನಡುವೆ ಕೃಷ್ಣಕೋಡಿ ಬಳಿ ಹೆದ್ದಾರಿಯಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದು ವಾಹನ ಸವಾರರಿಗೆ ಅಡ್ಡಿ ಉಂಟು ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.