ಸುಳ್ಯ: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕುದ್ಮಾರು ಗ್ರಾಮದ ಕೂರತ್ ಮಸೀದಿಯ ಉರುಸ್ ಕಾರ್ಯಕ್ರಮದಲ್ಲಿ ಭಾನುವಾರ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಈ ವೇಳೆ ಜನ ದಟ್ಟಣೆಯಲ್ಲಿ ಸಿಲುಕಿದ ಕೆಲವರು ದೈಹಿಕವಾಗಿ ನಿತ್ರಾಣಗೊಂಡು ಉಸಿರಾಟದ ಸಮಸ್ಯೆ ಎದುರಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಉರುಸ್ ಕಾರ್ಯಕ್ರಮಕ್ಕೆ ಬೇರೆ ಬೇರೆ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು. ಜನದಟ್ಟಣೆಯಲ್ಲಿ ಸಿಲುಕಿದ್ದ ಆರು ಮಂದಿ ನಿತ್ರಾಣಗೊಂಡಿದ್ದರು. ಸ್ಥಳದಲ್ಲಿದ್ದ ಆರೋಗ್ಯ ಸಿಬ್ಬಂದಿ ಅವರನ್ನು ಉಪಚರಿಸಿದ್ದರು. ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಪಡೆದು ಅವರು ಮನೆಗೆ ತೆರಳಿದ್ದಾರೆ. ಉರುಸ್ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು‘ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.