
ಮಂಗಳೂರು: ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಮಾಡಿಸಿಕೊಂಡವರಲ್ಲಿ ಅನರ್ಹರೂ ಇದ್ದಾರೆ ಎಂಬ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ‘ಶಂಕಿತ’ ಕಾರ್ಡ್‌ಗಳನ್ನು ಪತ್ತೆಹಚ್ಚುವ ಕಾರ್ಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.
ಕೇಂದ್ರ ಸರ್ಕಾರ ಕಳುಹಿಸಿರುವ ಪಟ್ಟಿಯಂತೆ ಸರ್ಕಾರ ರಾಜ್ಯದಲ್ಲಿ 7.76 ಲಕ್ಷ ಅನರ್ಹ ಪಡಿತರ ಚೀಟಿಗಳು ಇವೆ. ಇದರಲ್ಲಿ ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದ್ದು ಎಷ್ಟು ಎಂಬ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ. ಜಿಲ್ಲೆಯಲ್ಲಿ ಒಟ್ಟಾರೆ 4,56,368 ಪಡಿತರ ಕಾರ್ಡ್‌ಗಳು ಇದ್ದು 22,864 ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್‌ಗಳು ಮತ್ತು 28,000 ಬಿಪಿಎಲ್ ಕಾರ್ಡ್‌ಗಳು ಇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕಿ ಅನಿತಾ ಮಾಡ್ಲೂರು ತಿಳಿಸಿದರು.
‘ಅನರ್ಹ ಕಾರ್ಡ್‌ಗಳು ಇರಬಹುದು ಎಂಬ ಶಂಕೆ ಮೊದಲಿಂದಲೂ ಇತ್ತು. ಈಗ ಕೇಂದ್ರ ಸರ್ಕಾರವೇ ಪಟ್ಟಿಯನ್ನು ಕಳುಹಿಸಿದೆ. ಅದನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸುವ ಕಾರ್ಯ ಆಗಬೇಕಿದೆ’ ಎಂದು ಅವರು ಹೇಳಿದರು.
ಈ ನಡುವೆ ಅನರ್ಹಗೊಳಿಸಲು ಅನುಸರಿಸುವ ಮಾನದಂಡಗಳ ಬಗ್ಗೆ ಅಪಸ್ವರ ಎದ್ದಿದೆ. ಮನೆಗೆ ಸಿಮೆಂಟ್ ಗೋಡೆ ಇದ್ದರೆ ಹಾಗೂ ಮೊಬೈಲ್ ಫೋನ್ ಕೈಯಲ್ಲಿದ್ದರೆ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಮಾಡುವ ಪ್ರವೃತ್ತಿ ಸರಿಯಲ್ಲ. ನಗರದಲ್ಲಿ ಆದಾಯದ ಮಿತಿಗಿಂತ ಅವಶ್ಯಕತೆಗಳು ಮುಖ್ಯ. ಅಗತ್ಯ ವಸ್ತುಗಳನ್ನು ಹೊಂದಿರುವವರೆಲ್ಲರೂ ಶ್ರೀಮಂತರು ಎಂದು ಹೇಳುವುದು ಸರಿಯಲ್ಲ. ₹ 25 ಸಾವಿರಕ್ಕೆ ಹಳೆಯ ಕಾರು ಸಿಗುವ ಸಂದರ್ಭದಲ್ಲಿ ಕಾರು ಹೊಂದಿರುವವರು ಶ್ರೀಮಂತರು ಎಂದು ಹೇಳುವುದಕ್ಕಾಗುತ್ತದೆಯೇ? ಎಂದು ಕೇಳುತ್ತಾರೆ ಬಿದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಇಮ್ತಿಯಾಜ್.
‘ಅರ್ಹತೆಯನ್ನು ಅಳೆಯುವ ಮಾನದಂಡಗಳಿಂದಾಗಿ ಯಾರಿಗೂ ಅನ್ಯಾಯ ಆಗಬಾರದು. ದಕ್ಷಿಣ ಕನ್ನಡದಲ್ಲಂತೂ ಈಚೆಗೆ ನಾನಾ ಸಮಸ್ಯೆಗಳು ಕಾಡುತ್ತಿವೆ. ಕಲ್ಲು ಮತ್ತು ಮರಳಿನ ಅಭಾವದಿಂದಾಗಿ ಕೆಲಸ ಇಲ್ಲದೆ ಎಪಿಎಲ್ ಕಾರ್ಡ್‌ದಾರರು ಕೂಡ ಬಿಪಿಎಲ್ ಆಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಮು ಸಂಘರ್ಷದ ಕಾರಣದಿಂದಾಗಿ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗಿದ್ದು ಆರ್ಥಿಕ ಚಟುವಟಿಕೆಗಳು ನಡೆಯುತ್ತಿಲ್ಲ’ ಹೀಗಾಗಿ ಇಲ್ಲಿಗೆ ಸಂಬಂಧಿಸಿದ ಮಾನದಂಡಗಳಲ್ಲೂ ಬದಲಾವಣೆ ಮಾಡಬೇಕಾದೀತೇನೋ’ ಎಂದು ಅವರು ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಅಕ್ರಮ ಕಾರ್ಡ್‌ಗಳ ಸಂಖ್ಯೆ ಕಡಿಮೆ. ಇಲ್ಲಿ ಎರಡು ಎಕರೆ ಜಮೀನು ಇದ್ದವರು ಕೂಡ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡ ಉದಾಹರಣೆ ಇಲ್ಲ. ಆದರೆ ನಿಜವಾಗಿಯೂ ಬಿಪಿಎಲ್ ಕಾರ್ಡ್‌ಗೆ ಅರ್ಹರಾದ ಅನೇಕರು ಅದರಿಂದ ವಂಚಿತರಾಗಿದ್ದಾರೆ ಎಂಬುದು ಸತ್ಯ. ಇಂಥ ಅನೇಕ ಮಂದಿ ಸಿಪಿಎಂ ಕಚೇರಿಗೆ ಬಂದು ಕಾರ್ಡ್ ಮಾಡಿಸಿಕೊಡುವಂತೆ ಕೋರಿದ್ದಾರೆ. ಇಂಥ ಲೋಪಗಳನ್ನು ಸರಿಪಡಿಸಬೇಕು’ ಎಂದು ಮುಖಂಡ ಬಿ.ಎಂ ಭಟ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.