
ಮಂಗಳೂರು: ಕಿಬೊಟ್ಟೆಯ ಮಹಾಪಧಮನಿಯ ಅಪಾಯಕಾರಿ ಅನ್ನೂರಿಸಮ್ ಸರಿಪಡಿಸಲು ನಗರದ ಎಜೆ ಆಸತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಎಂಡೋವಾಸ್ಕ್ಯುಲರ್ ಅನ್ನೂರಿಸಮ್ ರಿಪೇರಿ (ಇವಿಎಆರ್) ಸ್ಟೆಂಟ್ಸ್ ವಿಧಾನದಿಂದ ಉಂಟಾದ ತೊಡಕುಗಳನ್ನು ಈ ಚಿಕಿತ್ಸೆಯ ಮೂಲಕ ಸರಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದ 57 ವರ್ಷದ ವ್ಯಕ್ತಿಗೆ ಡಯಾಲಿಸಿಸ್ ಮಾಡುತ್ತಿದ್ದು ಮೂತ್ರಪಿಂಡ ಕಸಿಗೆ ತಯಾರಿ ನಡೆಯುತಿತ್ತು. ಸಿಟಿ ಅಂಜಿಯೋಗ್ರಾಫಿ ಮಾಡಿದಾಗ ಹೃದಯದಿಂದ ಕೆಳಭಾಗಕ್ಕೆ ರಕ್ತ ಸಾಗಿಸುವ ಕಿಬ್ಬೊಟ್ಟೆಯ ಮಹಾಪಧಮನಿಯಲ್ಲಿ ಅನ್ಯೂರಿಸಮ್ ಪತ್ತೆಯಾಗಿತ್ತು. ತಕ್ಷಣ ಇವಿಎಆರ್ ಪ್ರಕ್ರಿಯೆ ಮೂಲಕ ಸೆಂಟ್ ಅಳವಡಿಸಲಾಯಿತು. ಆದರೆ ಎರಡು ತಿಂಗಳ ಬಳಿಕ ಆ ರಕ್ತನಾಳದಲ್ಲಿ ಸೋರಿಕೆಯಾಗಿ ಛಿದ್ರವಾಯಿತು. ಆ ಸ್ಟೆಂಟ್ ತೆಗೆದು ಹಾನಿಗೊಂಡ ಧಮನಿಯನ್ನು ಸರಿಪಡಿಸಲಾಯಿತು.
ಎಂಡೋವಾಸ್ಕ್ಯುಲರ್ ಸರ್ಜನ್ ಡಾ.ಸಂಭ್ರಮ್ ಶೆಟ್ಟಿ ನೇತೃತ್ವದಲ್ಲಿ ಕಾರ್ಡಿಯೋಫೊರಾಸಿಕ್ ಸರ್ಜನ್ ಡಾ. ಜಯಶಂಕರ್ ಮಾರ್ಲಾ, ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ. ಶಿವಶಂಕರ್ ಭಟ್, ಹೃದಯ ಅರಿವಳಿಕೆ ತಜ್ಞರಾದ ಡಾ.ಗುರುರಾಜ್ ತಂತ್ರಿ ಮತ್ತು ಡಾ.ರಾಕೇಶ್ ಮತ್ತು ಎಂಐಸಿಯು ಇಂಟೆನ್ಸಿವಿಸ್ಟ್ ಡಾ.ಸುದೇಶ್ ರಾವ್ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು.
ಎಜೆ ಆಸತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ನಿರಂತರವಾಗಿ ಅನ್ವಯಿಸಲಾಗುತ್ತಿದೆ. ಇದರಿಂದ ಕರಾವಳಿಯ ಜನರಿಗೆ ಜಾಗತಿಕ ಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿದೆ ಎಂದು ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.