
ಬೆಳ್ತಂಗಡಿ: ಇಲ್ಲಿನ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾಯೋಜನೆ (ಮುಡಾ) ಅಂತಿಮ ಜಾರಿ ಕುರಿತು ಸಾರ್ವಜನಿಕರ ಆಕ್ಷೇಪಣೆಗಳನ್ನು ಹಾಗೂ ವಾರ್ಡ್ ಸದಸ್ಯರು ನೀಡುವ ಬದಲಾವಣೆಗಳನ್ನು ಪರಿಶೀಲಿಸಿ ಅಂತಿಮ ತಿದ್ದುಪಡಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸಲು ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನಗರ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ವಹಿಸಿದ್ದರು.
ಸದಸ್ಯ ಜಗದೀಶ್ ಡಿ.ಅವರು ವಿಷಯ ಪ್ರಸ್ತಾಪಿಸಿ, ‘ಮಹಾಯೋಜನೆಯ ನಕ್ಷೆಯಲ್ಲಿ ಕಲ್ಕಣಿ ಪ್ರದೇಶದಲ್ಲಿ ಕೈಗಾರಿಕಾ ವಲಯ ಗುರುತಿಸಲಾಗಿದೆ. ಆದರೆ, ಇದು ಜನವಸತಿ ಪ್ರದೇಶ. ಅಲ್ಲಿ ಹಲವು ಮನೆಗಳಿವೆ. ಈ ಪ್ರದೇಶವನ್ನು ಪರಿಗಣಿಸಬಾರದು’ ಎಂದು ಸಲಹೆ ನೀಡಿದರು.
‘ನಗರದಲ್ಲಿ ಉದ್ಯೋಗವಕಾಶ ಲಭಿಸಬೇಕಿರುವುದರಿಂದ ಮಹಾಯೋಜನೆಯ ನಕ್ಷೆಯಲ್ಲಿ ಕೈಗಾರಿಕಾ ವಲಯವನ್ನು ಗುರುತಿಸಬೇಕು. ಅದಕ್ಕೆ ಕಲ್ಕಣಿ ಪ್ರದೇಶವನ್ನು ಆಯ್ಕೆಮಾಡಲಾಗಿದೆ’ ಎಂದು ಮುಖ್ಯಾಧಿಕಾರಿ ತಿಳಿಸಿದರು.
‘ಇಲ್ಲಿ ಕೈಗಾರಿಕಾ ವಲಯ ಮಾಡಲು ಸಾರ್ವಜನಿಕರ ವಿರೋಧ ಇದೆ. ಜನವಸತಿ ಪ್ರದೇಶವಾದ್ದರಿಂದ ಪರಿಸರ ಮಾಲಿನ್ಯ ಮೊದಲಾದ ಸಮಸ್ಯೆ ಉಂಟಾಗುವ ಸಂಭವ ಇದೆ’ ಎಂದು ಜಗದೀಶ್ ಸಲಹೆ ನೀಡಿದರು. ಈ ಸಂದರ್ಭ ಮುಡಾದ ಅಧಿಕಾರಿ ಮೋಕ್ಷ ಅವರು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಬೆಳ್ತಂಗಡಿ ಅಯ್ಯಪ್ಪ ಗುಡಿಯಿಂದ ಮೆಸ್ಕಾಂ ಮೂಲಕ ಕೆಲ್ಲಗುತ್ತುವರೆಗಿನ ರಸ್ತೆ 18 ಮೀಟರ್ ಎಂದಿದೆ. ಇಷ್ಟು ಅಗಲ ಆದರೆ ಜನರಿಗೆ ಸಮಸ್ಯೆಯಾಗಬಹುದು. ಅದಕ್ಕಾಗಿ ಇದನ್ನು 12 ಮೀಟರ್‌ಗೆ ಕಡಿಮೆ ಮಾಡಬೇಕು ಎಂದು ಅಧ್ಯಕ್ಷ ಜಯಾನಂದ ಗೌಡ ಸಲಹೆ ನೀಡಿದರು.
ನಗರದ ಒಳಗೆ ರಸ್ತೆಗೆ ಆರೂವರೆ ಮೀಟರ್ ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ವಾರ್ಡ್ ಸದಸ್ಯರಿಗೆ ಮಹಾಯೋಜನೆ ನಕ್ಷೆ ನೀಡಲಾಗಿದ್ದು, ವ್ಯಾಪ್ತಿಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿ, ಮಹಾಯೋಜನೆಯನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸುವ ಬಗ್ಗೆ ನಿರ್ಧರಿಸಲಾಯಿತು.
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಇತರ ಹಿಂದುಳಿದ ವರ್ಗದ ಬಿಪಿಎಲ್ ಕಾರ್ಡ್‌ದಾರರಿಗೆ ನೀರಿನ ಸಂಪರ್ಕವನ್ನು ಉಚಿತವಾಗಿ ನೀಡುವ ಬಗ್ಗೆ ನಿರ್ಣಯಿಸಲಾಯಿತು. ನಳ್ಳಿ ನೀರಿನ ಸಂಪರ್ಕ ದೂರ ಇದ್ದರೆ ಪೈಪ್ ಖರ್ಚನ್ನು ಗ್ರಾಹಕರೇ ನೀಡಬೇಕು. ಸಂಪರ್ಕವನ್ನು ಉಚಿತವಾಗಿ ನೀಡುವುದಾಗಿ ಮುಖ್ಯಾಧಿಕಾರಿ ಉತ್ತರಿಸಿದರು.
ಬೆಳ್ತಂಗಡಿ ನಗರ ಪಂಚಾಯಿತಿ ವ್ಯಾಪ್ತಿಯ ಆಶ್ರಯ ಯೋಜನೆ ಮೂಲಕ ₹ 2.75 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದವರಿಗೆ ಮನೆಯ ಕೊನೆಯ ಕಂತು ಇನ್ನೂ ಬಿಡುಗಡೆಯಾಗಿಲ್ಲ. ಮನೆ ಕಟ್ಟಿದವರು ಸಮಸ್ಯೆಯಲ್ಲಿದ್ದಾರೆ ಎಂದು ಜಗದೀಶ್ ಗಮನ ಸೆಳೆದರು. ಮನೆಯ ಅಂತಿಮ ವರದಿಯನ್ನು ಅಪ್‌ಲೋಡ್ ಮಾಡಲಾಗಿದೆ. ಆದರೆ, ಹಣ ಇನ್ನೂ ಬಂದಿಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಬೆಳ್ತಂಗಡಿ ನಗರದಲ್ಲಿ ಕುಡಿಯುವ ನೀರಿನ ಯೋಜನೆಗೆ ಮೆಸ್ಕಾಂನಿಂದ ತಾತ್ಕಾಲಿಕ ಸಂಪರ್ಕ ಪಡೆದುಕೊಂಡಿದ್ದು, ಇದಕ್ಕೆ ಎರಡರಷ್ಟು ಬಿಲ್ ಬರುತ್ತಿದೆ. ಇದನ್ನು ನೇರ ಸಂಪರ್ಕ ಮಾಡಿಕೊಡಬೇಕು ಎಂದು ಮುಖ್ಯಾಧಿಕಾರಿ ತಿಳಿಸಿದರು. ಬೆಳ್ತಂಗಡಿ ನಗರದಲ್ಲಿ ಕಳಪೆ ಕಬ್ಬಿಣದ ಕತ್ತಿ ಮಾರಾಟ ಮಾಡುತ್ತಿರುವುದನ್ನು ತಡೆ ಹಿಡಿಯುವಂತೆ ಕಮ್ಮಾರ ಸಂಘದವರು ನಗರ ಪಂಚಾಯಿತಿಗೆ ನೀಡಿದ ಮನವಿ ಬಗ್ಗೆ ಚರ್ಚೆ ನಡೆಯಿತು.
ಬೆಳ್ತಂಗಡಿ ನಗರದಲ್ಲಿ ಮನೆ, ಮನೆಗೆ ಬ್ಯಾಗ್ ನೀಡಿ ರಟ್ಟು ಮತ್ತು ಬಾಟಲಿ ಸಂಗ್ರಹವನ್ನು ಹಿಂದಿ ಮಾತನಾಡುವವರು ಮಾಡುತ್ತಿದ್ದು, ಇದಕ್ಕೆ ತಡೆ ನೀಡುವ ಕುರಿತು ಚರ್ಚಿಸಲಾಯಿತು. ಬೆಳ್ತಂಗಡಿಯಲ್ಲಿ ಸಂತೆ ದಿನ ಸಂತೆಕಟ್ಟೆ ಪರಿಸರದಲ್ಲಿ ರಸ್ತೆ ಬದಿವರೆಗೆ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗುತ್ತಿರುವ ಬಗ್ಗೆ ಸಾರ್ವಜನಿಕ ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ರಾಜೇಶ್, ಸದಸ್ಯರಾದ ಅಂಬರೀಶ್, ರಜನಿ ಕುಡ್ವ, ತುಳಸಿ, ಸದಸ್ಯ ಜಗದೀಶ್ ಡಿ., ಜನಾರ್ದನ್, ಮುಸ್ತರ್ಜಾನ್, ರಾಜಶ್ರೀ, ನಾಮನಿರ್ದೇಶನ ಸದಸ್ಯರಾದ ಸತೀಶ್ ಶೆಟ್ಟಿ, ಅಬ್ದುಲ್ ಬಶೀರ್ ಭಾಗವಹಿಸಿದ್ದರು.