ADVERTISEMENT

ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಕ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 3:07 IST
Last Updated 14 ನವೆಂಬರ್ 2025, 3:07 IST
ಒಳಮೊಗ್ರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ನಡೆಯಿತು
ಒಳಮೊಗ್ರು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ನಡೆಯಿತು   

ಪುತ್ತೂರು: ಸಾಕು ಪ್ರಾಣಿಗಳನ್ನು ಬೀದಿಗೆ ಬಿಟ್ಟು ಅವುಗಳಿಂದಾಗಿ ಸಾರ್ವಜನಿಕರಿಗೆ ‌ತೊಂದರೆಯಾದರೆ ಅವುಗಳ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಂಡು ದಂಡ ವಿಧಿಸುವ ಬಗ್ಗೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ವಿನೋದ್ ಶೆಟ್ಟಿ ಮುಡಾಲ ಅವರು ಬೀದಿ ನಾಯಿಗಳ ಉಪಟಳದ ಕುರಿತು ಪ್ರಸ್ತಾಪಿಸಿದರು.

ಗ್ರಾಮದ ಜನರು ತಮ್ಮ ಮನೆಯಲ್ಲಿ ಸಾಕುವ ನಾಯಿ, ಬೆಕ್ಕು, ಆಡು, ಕುರಿ, ದನ, ಎಮ್ಮೆ, ಕೋಣ ಸೇರಿದಂತೆ ‌ಯಾವುದೇ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡಬಾರದು. ಈ ಬಗ್ಗೆ ಬ್ಯಾನರ್ ಅಳವಡಿಸಿ, ಮಾಧ್ಯಮಗಳ ಮೂಲಕ ಪ್ರಕಟಣೆ ನೀಡುವ ಬಗ್ಗೆಯೂ ತೀರ್ಮಾನಿಸಲಾಯಿತು.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ ಅಳವಡಿಸಿರುವ ಬ್ಯಾನರ್‌ ತೆರವುಗೊಳಿಸಲು 15 ದಿನಗಳ ಕಾಲಾವಕಾಶ ನೀಡಿ ನೋಟಿಸ್‌ ನೀಡಲಾಗಿದೆ ಎಂದು ಪಿಡಿಒ ಸುರೇಶ್ ತಿಳಿಸಿದರು. 

ಅನಧಿಕೃತ ರಸ್ತೆ ವೃತ್ತ: ಕುಟ್ಟಿನೋಪಿನಡ್ಕದಲ್ಲಿ ರಸ್ತೆ ಮಧ್ಯೆ ವೃತ್ತವೊಂದನ್ನು ನಿರ್ಮಿಸಲಾಗಿದ್ದು, ಇದರಿಂದ ವಾಹನಗಳನ್ನು ತಿರುಗಿಸಲು ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಬಗ್ಗೆ ಚರ್ಚೆ ನಡೆಯಿತು. ಈ ವೃತ್ತ ರಚನೆಗೆ ಪಂಚಾಯಿತಿಯಿಂದ ‌ಅನುಮತಿ ಪಡೆದುಕೊಂಡಿಲ್ಲ ಎಂದು ಪಿಡಿಒ ತಿಳಿಸಿದರು. ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದು ಎಂದು ನಿರ್ಣಯಿಸಲಾಯಿತು.

ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೈಕಾರದಲ್ಲಿ ಅಳವಡಿಸಿದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ರಸ್ತೆಯಿಂದ ದೂರದಲ್ಲಿದ್ದರೂ ಸಂಪರ್ಕ ನೀಡಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೆಸ್ಕಾಂಗೆ ಆಕ್ಷೇಪ ಮಾಡುತ್ತಿದ್ದಾರೆ. ಸಂಪರ್ಕ ಸಿಗದೆ ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದು ಸದಸ್ಯ ಮಹೇಶ್ ರೈ ಕೇರಿ ತಿಳಿಸಿದರು. 

ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಕಾರ್ಯದರ್ಶಿ ಜಯಂತಿ, ಸದಸ್ಯರಾದ ಶೀನಪ್ಪ ನಾಯ್ಕ, ಚಿತ್ರಾ ಬಿ.ಸಿ., ಶಾರದಾ ಆಚಾರ್ಯ, ಸುಂದರಿ ಪರ್ಪುಂಜ, ನಳಿನಾಕ್ಷಿ, ವನಿತಾ ಕುಮಾರಿ, ರೇಖಾ ಯತೀಶ್ ಬಿಜತ್ರೆ, ಪ್ರದೀಪ್, ಲತೀಫ್ ಕುಂಬ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.