ADVERTISEMENT

ಮುಂದಿನ ಸೆಪ್ಟೆಂಬರ್‌ಗೆ ಕಟ್ಟಡ ಪೂರ್ಣ: ಸಚಿವ ಡಾ. ಶರಣಪ್ರಕಾಶ ಪಾಟೀಲ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 4:18 IST
Last Updated 18 ಜೂನ್ 2025, 4:18 IST
ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಮಂಗಳೂರಿನ ಮೇರಿಹಿಲ್‍ನಲ್ಲಿ ನಿರ್ಮಾಣವಾಗುತ್ತಿರುವ ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯ ಪ್ರಾದೇಶಿಕ ಕಚೇರಿ ಕಟ್ಟಡ ಕಾಮಗಾರಿ ಪರಿಶೀಲಿಸಿದರು : ಪ್ರಜಾವಾಣಿ ಚಿತ್ರ
ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಮಂಗಳೂರಿನ ಮೇರಿಹಿಲ್‍ನಲ್ಲಿ ನಿರ್ಮಾಣವಾಗುತ್ತಿರುವ ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯ ಪ್ರಾದೇಶಿಕ ಕಚೇರಿ ಕಟ್ಟಡ ಕಾಮಗಾರಿ ಪರಿಶೀಲಿಸಿದರು : ಪ್ರಜಾವಾಣಿ ಚಿತ್ರ   

ಮಂಗಳೂರು: ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಕಟ್ಟಡ ಕಾಮಗಾರಿಯು 2026ರ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಅವಧಿಗೆ ಮುನ್ನವೇ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.

ಮೇರಿಹಿಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರಾದೇಶಿಕ ಕಚೇರಿ ಕಟ್ಟಡದ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯದ ಆರು ಕಡೆಗಳಲ್ಲಿ ಸ್ಕಿಲ್ ಲ್ಯಾಬ್ ನಿರ್ಮಾಣ ಮಾಡಲಾಗುತ್ತಿದೆ. ದಾವಣಗೆರೆ, ಕಲಬುರಗಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಮೈಸೂರು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿದೆ. ಮಂಗಳೂರಿನಲ್ಲಿ ₹49 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಕಚೇರಿ ಜೊತೆಗೆ ಸ್ಕಿಲ್ ಲ್ಯಾಬ್ ಹಾಗೂ ಸ್ಪೋರ್ಟ್ ಹಬ್ ನಿರ್ಮಿಸಲಾಗುತ್ತಿದೆ ಎಂದರು.

ಪ್ರಾದೇಶಿಕ ಕಚೇರಿ ಕಟ್ಟಡವು 1.20 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಒಟ್ಟು ಆರು ಅಂತಸ್ತಿನ ಕಟ್ಟಡದಲ್ಲಿ ತಳ ಅಂತಸ್ತಿನಲ್ಲಿ ಪಾರ್ಕಿಂಗ್, ನೆಲ ಮಹಡಿಯಲ್ಲಿ ವಿವಿ ಕುಲಪತಿ, ರಜಿಸ್ಟ್ರಾರ್, ಹಣಕಾಸು ಅಧಿಕಾರಿ ಕಚೇರಿಗಳು ಇರಲಿವೆ. ಎರಡನೇ ಮಹಡಿಯಲ್ಲಿ ಸ್ಕಿಲ್ ಲ್ಯಾಬ್, ನಾಲ್ಕನೇ ಮಹಡಿಯಲ್ಲಿ ಸ್ಪೋರ್ಟ್‌ ಇರಲಿದೆ. ಮೂರು ತಿಂಗಳ ಹಿಂದೆ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಕಟ್ಟಡದ ಕಾರ್ಯಪಾಲಕ ಎಂಜಿನಿಯರ್ ಧನಂಜಯ್ ಕೆ.ಕೆ. ತಿಳಿಸಿದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್‍ ಅಧ್ಯಕ್ಷ ಡಾ. ಇಫ್ತಿಕಾರ್ ಅಲಿ, ರಾಜೀವ್ ಗಾಂಧಿ ವಿವಿ ಸೆನೆಟ್ ಸದಸ್ಯ ಡಾ. ಶಿವಶರಣ್ ಶೆಟ್ಟಿ, ಕಣಚೂರು ವಿದ್ಯಾಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ ಹಾಜರಿದ್ದರು.

ಜಿಟಿಟಿಸಿಗೆ ಸಚಿವರ ಭೇಟಿ

ಮಂಗಳೂರು ಬೈಕಂಪಾಡಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ ನೀಡಿದರು. ಕೇಂದ್ರದ ಉಪಕರಣಗಳು ತರಬೇತಿ ಯಂತ್ರಗಳನ್ನು ಅವರು ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶೇ 100ರಷ್ಟು ಉದ್ಯೋಗದ ಭರವಸೆ ನೀಡುವ ಈ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದರು. ಪ್ರಾಂಶುಪಾಲ ಲಕ್ಷ್ಮೀನಾರಾಯಣ ಸಿ.ಆರ್ ಘಟಕ ಮುಖ್ಯಸ್ಥ ಕುಮಾರಸ್ವಾಮಿ ಕೇಂದ್ರ ಕಚೇರಿ ತರಬೇತಿ ಉಪ ವ್ಯವಸ್ಥಾಪಕ ಲಕ್ಷ್ಮಣ್ ನಾಯಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.