ADVERTISEMENT

ಜನರ ಪ್ರತಿಕ್ರಿಯೆ ಪಡೆಯಲು ಠಾಣೆಗಳಲ್ಲಿ ಕ್ಯೂಆರ್‌ ಕೋಡ್‌

ಸೇವೆಗೆ ಡಿಜಿಪಿ ಪ್ರವೀಣ್‌ ಸೂದ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 13:47 IST
Last Updated 17 ಏಪ್ರಿಲ್ 2023, 13:47 IST
ಕಳವಾದ ಮೊಬೈಲ್‌ ಮರಳಿ ಪಡೆಯಲು ನೆರವಾಗುವ ವಾಟ್ಸ್‌ಆ್ಯಪ್‌ ಸಂಖ್ಯೆಯನ್ನು ಡಿಜಿಪಿ ಮತ್ತು ಐಜಿಪಿ ಪ್ರವೀಣ್‌ ಸೂದ್‌ ಅವರು ನಗರದಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಿದರು. ಕುಲದೀಪ್‌ ಕುಮಾರ್‌ ಆರ್‌. ಜೈನ್‌, ಡಿಸಪಿ (ಕಾನೂನು ಸುವ್ಯವಸ್ಥೆ) ಅಂಶುಕುಮಾರ್‌ ಹಾಗೂ ಡಿಸಿಪಿ (ಅಪರಾಧ) ದಿನೇಶ್‌ಕುಮಾರ್‌ ಇದ್ದಾರೆ
ಕಳವಾದ ಮೊಬೈಲ್‌ ಮರಳಿ ಪಡೆಯಲು ನೆರವಾಗುವ ವಾಟ್ಸ್‌ಆ್ಯಪ್‌ ಸಂಖ್ಯೆಯನ್ನು ಡಿಜಿಪಿ ಮತ್ತು ಐಜಿಪಿ ಪ್ರವೀಣ್‌ ಸೂದ್‌ ಅವರು ನಗರದಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಿದರು. ಕುಲದೀಪ್‌ ಕುಮಾರ್‌ ಆರ್‌. ಜೈನ್‌, ಡಿಸಪಿ (ಕಾನೂನು ಸುವ್ಯವಸ್ಥೆ) ಅಂಶುಕುಮಾರ್‌ ಹಾಗೂ ಡಿಸಿಪಿ (ಅಪರಾಧ) ದಿನೇಶ್‌ಕುಮಾರ್‌ ಇದ್ದಾರೆ   

ಮಂಗಳೂರು: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡುವ ಸಾರ್ವಜನಿಕರಿಂದ ಇಲಾಖೆಯ ಸೇವೆಯ ಗುಣಮಟ್ಟದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪೊಲೀಸ್‌ ಇಲಾಖೆ ಮುಂದಾಗಿದೆ. ಇದಕ್ಕಾಗಿ ಕ್ಯೂ.ಆರ್‌.ಕೋಡ್‌ ಸ್ಕ್ಯಾನ್‌ ಮಾಡಿ ಪ್ರತಿಕ್ರಿಯೆ ಹಂಚಿಕೊಳ್ಳುವ ಸೇವೆಯನ್ನು ಆರಂಭಿಸಲಾಗಿದೆ. ಪ್ರತಿ ಠಾಣೆಗಳಲ್ಲೂ ಕ್ಯೂ.ಆರ್‌.ಕೋಡ್‌ ಅನ್ನು ಪ್ರದರ್ಶಿಸಲಾಗುತ್ತದೆ.

ಈ ಸೇವೆಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಅವರು ಭಾನುವಾರ ಚಾಲನೆ ನೀಡಿದ್ದಾರೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌ ಜೈನ್‌, ‘ಪೊಲೀಸ್ ಇಲಾಖೆಯ ಸೇವೆ ಸುಧಾರಣೆಗೆ ನಾಗರಿಕರ ಸ್ಪಂದನೆಯೂ ಅಗತ್ಯ. ಠಾಣೆಗಳಿಗೆ ಭೇಟಿ ನೀಡುವ ಸಾರ್ವಜನಿಕರಿಂದ ಅಲ್ಲಿನ ಸೇವೆಯ ಬಗ್ಗೆ ನೇರವಾಗಿ ಮಾಹಿತಿ ಪಡೆಯಲು ಕ್ರಮ ಕೈಗೊಂಡಿದ್ದೇವೆ. ಠಾಣೆಗಳ್ಲಲಿ ಅಳವಡಿಸಿರುವ ಕ್ಯೂ.ಆರ್‌. ಕೋಡ್‌ ಸ್ಕ್ಯಾನ್‌ ಮಾಡಿ, ಅದರಲ್ಲಿ ಆಯಾ ಠಾಣೆಯನ್ನು ಆಯ್ಕೆ ಮಾಡಿ, ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ತುಂಬುವ ಮೂಲಕ ಪ್ರತಿಕ್ರಿಯೆಯನ್ನು ನೀಡಬಹುದು’ ಎಂದರು.

ADVERTISEMENT

‘ಪಾಸ್‌ಪೋರ್ಟ್‌ ಅರ್ಜಿಗಳಿಗೆ ಸಂಬಂಧಿಸಿ ವಿಳಾಸ ಪರಿಶೀಲನೆ, ಪ್ರಕರಣಗಳ ತನಿಖೆ ಪ್ರಗತಿ ಬಗ್ಗೆಯೂ ಸಾರ್ವಜನಿಕರು ಅಭಿಪ್ರಾಯ ಹಂಚಿಕೊಳ್ಳಬಹುದು. ಅಹವಾಲುಗಳನ್ನೂ ಸಲ್ಲಿಸಬಹುದು. ಠಾಣೆಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ಆ ಬಗ್ಗೆಯೂ ದೂರನ್ನೂ ನೀಡಬಹುದು’ ಎಂದರು.

‘ನಾವೂ ಮೂರು ದಿನಗಳಿಂದ ಪ್ರಾಯೋಗಿಕವಾಗಿ ಈ ಸೇವೆಯನ್ನು ಆಯ್ದ ಪೊಲೀಸ್‌ ಠಾಣೆಗಳಲ್ಲಿ ಜಾರಿಗೆ ತಂದಿದ್ದವು. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಸದ್ಯ ಇಂಗ್ಲಿಷ್‌ನಲ್ಲಿ ಮಾತ್ರ ಈ ಸೇವೆ ಲಭ್ಯ ಇದೆ. ಶೀಘ್ರವೇ ಕನ್ನಡದಲ್ಲೂ ಸೇವೆ ಒದಗಿಸಲು ಕ್ರಮಕೈಗೊಳ್ಳುತ್ತೇವೆ’ ಎಂದರು.

ಮೊಬೈಲ್ ಕಳವಾದರೆ ‘ಹಾಯ್‌’ ಹೇಳಿ ಸಾಕು!

ಕಳವಾದ ಮೊಬೈಲ್‌ಗಳನ್ನು ಪತ್ತೆಗೆ ನೆರವಾಗಲು ಕೇಂದ್ರ ಸರ್ಕಾರ ಪ್ರತ್ಯೇಕ ಪೋರ್ಟಲ್‌ (www.ceir.gov.in) ಅನ್ನು ಇತ್ತೀಚೆಗೆ ಆರಂಭಿಸಿದೆ. ಆದರೆ, ಅದರಲ್ಲಿ ವಿವರಗಳನ್ನು ತುಂಬಲು ಕೆಲವು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಈ ಪ್ರಕ್ರಿಯೆಯನ್ನು ಸರಳಗೊಳಿಸಲು ಕಮಿಷನರೇಟ್‌ ವ್ಯಾಪ್ತಿಯಲ್ಲಿ ವಾಟ್ಸ್‌ಆ್ಯಪ್‌ ಮೂಲಕ ದೂರು ನೀಡುವ ಚಾಟ್‌ಬೋಟ್‌ ಸೇವೆಯನ್ನು ಜಾರಿಗೊಳಿಸಲಾಗಿದೆ.

‘ಮೊಬೈಲ್‌ ಕಳವಾದ ಬಗ್ಗೆ 8277949183 ವಾಟ್ಸ್‌ಆ್ಯಪ್‌ ಸಂಖ್ಯೆಗೆ ಹಾಯ್ ಎಂದು ಸಂದೇಶ ಕಳುಹಿಸಿದರೆ ಸಾಕು. ಅವರ ವಾಟ್ಸ್‌ಆ್ಯಪ್‌ಗೆ ಅರ್ಜಿಯ ಕೊಂಡಿಯನ್ನು ಕಳುಹಿಸುತ್ತೇವೆ. ಕಳವಾದ ಮೊಬೈಲ್‌ನ ಐಎಂಇಐ ಸಂಖ್ಯೆಯೂ ಸೇರಿ ಕೆಲವು ವಿವರಗಳನ್ನು ಭರ್ತಿ ಮಾಡಿದರೆ ಸಾಕು. ಆ ಮಾಹಿತಿಯನ್ನು ಪೊಲೀಸ್‌ ಇಲಾಖೆಯ ಸಿಬ್ಬಂದಿಯೇ ಸಿಇಐಆರ್‌ ಪೋರ್ಟಲ್‌ನಲ್ಲಿ ತುಂಬಿಸಿ, ಮೊಬೈಲ್‌ ಪತ್ತೆಗೆ ನೆರವಾಗುತ್ತಾರೆ’ ಎಂದು ಕುಲ್‌ದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದರು.

‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮೊಬೈಲ್‌ ಕಳವಿಗೆ ಸಂಬಂಧಿಸಿ ಸಿಇಐಆರ್‌ ಪೋರ್ಟಲ್‌ನಲ್ಲಿ ಇದುವರೆಗೆ 757 ಕೋರಿಕೆ ಅರ್ಜಿಗಳು ಸಲ್ಲಿಕೆಯಾಗಿವೆ. 200ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದೇವೆ. 120 ಮೊಬೈಲ್‌ಗಳನ್ನು ಮಾಲೀಕರಿಗೆ ಮರಳಿಸಲಾಗಿದೆ’ ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.