
ಪುತ್ತೂರು: ನಿವೃತ್ತ ಪ್ರಾಧ್ಯಾಪಕ ಹಾಗೂ ಕೃಷಿ ಮಾರುಕಟ್ಟೆ ತಜ್ಞ ವಿಘ್ನೇಶ್ವರ ವರ್ಮುಡಿ ಅವರು ಕೃಷಿ ಅರ್ಥಶಾಸ್ತ್ರ, ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ, ಸಹಕಾರ ವಿಷಯಗಳ ಬಗ್ಗೆ ಪ್ರಕಟಿಸಿದ ಸಂಶೋಧನಾ ಲೇಖನ ಪರಿಗಣಿಸಿ ಅವರನ್ನು ಗೂಗಲ್ ಸ್ಕಾಲರ್ ಎಂದು ಪರಿಗಣಿಸಲಾಗಿದೆ.
ಸಂಶೋಧನಾ ಕಾರ್ಯದ ಮಹತ್ವ, ಕ್ಷೇತ್ರ, ಪರಿಣತಿ, ಸಂಶೋಧಕರಿಗೆ ಮಾರ್ಗದರ್ಶನ ಆಗುವಂಥ ಲೇಖನ ಮೊದಲಾದ ಮಾನದಂಡಗಳ ಮೂಲಕ ಗೂಗಲ್ ಸ್ಕಾಲರ್ ಸ್ಥಾನಮಾನ ಲಭಿಸುತ್ತದೆ.
ವರ್ಮುಡಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿದ್ದ ಲೇಖನಗಳನ್ನು ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಸಂಶೋಧಕರು ಅವರ ಸಂಶೋಧನೆಗಳ ಮೂಲವಾಗಿ ಬಳಸಿಕೊಂಡು ಅದರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಜೂನ್ 2025ರ ವರೆಗೆ ಆರು ತಿಂಗಳಲ್ಲಿ ವರ್ಮುಡಿ ಅವರ ಲೇಖನಗಳನ್ನು ಇಥಿಯೋಪಿಯ, ನೈಜೀರಿಯ, ಈಜಿಪ್ಟ್, ಆಫ್ರಿಕ, ನೇಪಾಳ, ಘಾನಾ ಮತ್ತು ಬಾಂಗ್ಲಾದೇಶಗಳ ಸಂಶೋಧಕರು ಉಲ್ಲೇಖಿಸಿದ್ದರು. ಅವರ ಲೇಖನಗಳು ಮತ್ತು ಪರಾಮರ್ಶನ ಗ್ರಂಥಗಳನ್ನು ಸುಮಾರು 180ಕ್ಕಿಂತ ಅಧಿಕ ಆಂತರಿಕ ಹಾಗೂ ಅಂತರರಾಷ್ಟ್ರೀಯ ಸಂಶೋಧಕರು ಅವರ ಸಂಶೋಧನೆಗಳಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದಾಗಿ ಗೂಗಲ್ ಸ್ಕಾಲರ್ ಪ್ರಕಾರ ಅಲ್ಲಿ ಸಂಗ್ರಹ ಇರುವ 176 ಮಿಲಿಯನ್‌ಗಿಂತ ಅಧಿಕ ಸಂಶೋಧಕರ ಲೇಖನಗಳ ಉಲ್ಲೇಖಕ್ಕೆ ಸಂಬಂಧಿಸಿದಂತೆ ವರ್ಮುಡಿ ಅವರ ಸ್ಥಾನ ಏರಿಕೆಯಾಗಿದ್ದು, ಅವರ ಪರಿಣತಿ ಕ್ಷೇತ್ರದಲ್ಲಿ ಅವರೊಬ್ಬ ಪ್ರಭಾವಶಾಲಿ ಸಂಶೋಧಕರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.