
ಪುತ್ತೂರು: ‘ತಳಮಟ್ಟದ ಜನರ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು. ರೇಷನ್ ಕಾರ್ಡ್ ಸಮಸ್ಯೆ, ಅನಾರೋಗ್ಯ ಸಮಸ್ಯೆ ಮೊದಲಾದ ವಿಚಾರಗಳಿಗೆ ಸ್ಪಂದನೆ ನೀಡುವ ಮೂಲಕ ಜನರ ಪ್ರೀತಿ ಗಳಿಸಬೇಕು’ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಚಾಲನೆ, ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ₹ 16 ಕೋಟಿಯ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಾಗುತ್ತಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಕಾಮಗಾರಿಗಳು ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ₹ 15 ಕೋಟಿ ಅನುದಾನದ ಜತೆಗೆ ಅಲ್ಪಸಂಖ್ಯಾತ ನಿಗಮ ಸೇರಿದಂತೆ ಬೇರೆ ಬೇರೆ ಅನುದಾನಗಳು ಬರಲಿದ್ದು, ಅದನ್ನು ವ್ಯವಸ್ಥಿತವಾಗಿ ಹಂಚುವ ಕೆಲಸ ಮಾಡಲಾಗುವುದು ಎಂದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೊಳ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ,ಪೂಡಾ ಸದಸ್ಯರಾದ ನಿಹಾಲ್ ಪಿ.ಶೆಟ್ಟಿ, ಲ್ಯಾನ್ಸಿ ಮಸ್ಕರೇನ್ಹಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಮೋನಪ್ಪ ಪೂಜಾರಿ ಕೆರೆಮಾರು, ದಿವ್ಯನಾಥ ಶೆಟ್ಟಿ ಕಾವು, ಸೆಲ್ಮಾ, ವಿನಯಕುಮಾರ್, ಜಯಂತಿ ಪೊಟ್ಟುಮೂಲೆ,ವಲಯ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಹಾಜಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಮತ್ತಿತರರು ಇದ್ದರು.
ವಿವಿಧ ಕಾಮಗಾರಿಗಳ ಉದ್ಘಾಟನೆ,ಶಿಲಾನ್ಯಾಸ: ₹30 ಲಕ್ಷ ಅನುದಾನದಲ್ಲಿ ನಡೆದ ಮಾಡನ್ನೂರು-ಅಂಕೋತ್ತಿಮಾರ್ ಕಾಂಕ್ರಿಟ್ ರಸ್ತೆ, ₹ 5 ಲಕ್ಷ ವೆಚ್ಚದ ಕಾವು ರಿಕ್ಷಾ ತಂಗುದಾಣ, ₹ 15 ಲಕ್ಷ ಅನುದಾನದಲ್ಲಿ ಕೈಗೊಂಡ ಕಾವು-ಸಸ್ಪೇಟಿ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಲಾಯಿತು. ಕೊಳ್ತಿಗೆ ಗ್ರಾಮದ ಬದಿಯಡ್ಕ ಅಲ್ಪಸಂಖ್ಯಾತ ಕಾಲೊನಿಯ ರಸ್ತೆ, ಕಾವು-ಉಜಿರುಗುರಿ ಕಾಲೋನಿ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.