ADVERTISEMENT

ಮಂಗಳೂರು | 170 ಟನ್ ಪ್ಲಾಸ್ಟಿಕ್ ಕಸ ಬಳಸಿ 50 ಕಿ.ಮೀ ರಸ್ತೆ ನಿರ್ಮಾಣ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ ಹೆದ್ದಾರಿ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:34 IST
Last Updated 10 ಜೂನ್ 2025, 13:34 IST
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯನ್ನು ಎಲ್‌ಡಿಪಿಇ ಹಾಗೂ ಟಾರ್ ಬಳಸಿ ನಿರ್ಮಿಸಲಾಗಿದೆ : ಪ್ರಜಾವಾಣಿ ಚಿತ್ರ
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯನ್ನು ಎಲ್‌ಡಿಪಿಇ ಹಾಗೂ ಟಾರ್ ಬಳಸಿ ನಿರ್ಮಿಸಲಾಗಿದೆ : ಪ್ರಜಾವಾಣಿ ಚಿತ್ರ   

ಮಂಗಳೂರು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಗ್ರಹಿಸಿದ 170 ಟನ್ ಪ್ಲಾಸ್ಟಿಕ್ ಕಸವನ್ನು ಸದ್ಬಳಕೆ ಮಾಡಿಕೊಂಡು, ಕರಾವಳಿಯಲ್ಲಿ 50 ಕಿ.ಮೀ. ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ. ‌

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಿಲ್ಲೆಯ ತಲಪಾಡಿಯಿಂದ ನಂತೂರುವರೆಗೆ ಹಾಗೂ ಸುರತ್ಕಲ್‌ನಿಂದ ಸಾಸ್ತಾನದವರೆಗೆ ಕಡಿಮೆ ಸಾಂದ್ರತೆಯ ಪಾಲಿಥಿಲೀನ್ (ಎಲ್‌ಡಿಪಿಇ) ಬಳಸಿ ನಿರ್ಮಿಸಿರುವ ಸರ್ವಿಸ್ ರಸ್ತೆ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಂಡಿದೆ.

ಏನಿದು ಪ್ಲಾಸ್ಟಿಕ್ ರಸ್ತೆ?: ಅಧಿಕ ಮಳೆಯಾಗುವ ಪ್ರದೇಶದಲ್ಲಿ ಡಾಂಬರ್ ರಸ್ತೆಗಳಲ್ಲಿ ಬಹುಬೇಗ ಹೊಂಡಗಳು ನಿರ್ಮಾಣವಾಗುತ್ತವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಕಚೇರಿಯ ಯೋಜನಾ ನಿರ್ದೇಶಕರು, ಕೇಂದ್ರ ಹೆದ್ದಾರಿ ಇಲಾಖೆಗೆ ಪರ್ಯಾಯ ಯೋಜನೆಯ ವರದಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಹೆದ್ದಾರಿ ನಿರ್ಮಾಣದ ಮಾನದಂಡಗಳನ್ನು ರೂಪಿಸುವ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ಜಿಲ್ಲೆಯ ಸರ್ವಿಸ್ ರಸ್ತೆ ನಿರ್ಮಾಣ ಪ್ರಯೋಗಕ್ಕೆ ಎಲ್‌ಡಿಪಿಇ ಪ್ಲಾಸ್ಟಿಕ್ ಬಳಕೆಗೆ ಅನುಮತಿ ನೀಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ರಸ್ತೆ ನಿರ್ಮಾಣಕ್ಕೆ ಜಲ್ಲಿ ಮತ್ತು ಬಿಟುಮಿನ್ ಮಿಶ್ರಣದ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಸುಮಾರು 160 ಡಿಗ್ರಿ ಸೆಲ್ಸಿಯಸ್ ಉ‌ಷ್ಣತೆಯಲ್ಲಿ ಡಾಂಬರ್‌ ಬಿಸಿ ಮಾಡುವಾಗ ಎಲ್‌ಡಿಪಿಇ ಬಳಕೆ ಮಾಡಿ, ಅದನ್ನು ಜಲ್ಲಿ ಮೇಲೆ ಸುರಿದಾಗ ರಸ್ತೆಯ ಗಟ್ಟಿತನ ಹೆಚ್ಚಾಗಿ, ದೀರ್ಘ ಬಾಳಿಕೆ ಬರುತ್ತದೆ. ಡಾಂಬರ್‌ ಮತ್ತು ಎಲ್‌ಡಿಪಿಇ ಪ್ಲಾಸ್ಟಿಕ್ ಅನ್ನು ಶೇ 90:10ರ ಅನುಪಾತದಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಪ್ಲಾಸ್ಟಿಕ್ ಸಂಗ್ರಹ ಹೇಗೆ?: ಮಂಗಳಾ ರಿಸೋರ್ಸಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಶೂನ್ಯ ನಿರ್ವಹಣಾ ವೆಚ್ಚದ ಮಾದರಿಯಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದ (ಎಂಆರ್‌ಎಫ್‌) ನಿರ್ವಹಿಸುತ್ತಿದೆ. ಈ ನಾಲ್ಕು ಘಟಕಗಳ ವ್ಯಾಪ್ತಿಯಲ್ಲಿರುವ 220 ಗ್ರಾಮ ಪಂಚಾಯಿತಿಗಳಿಂದ ಘನತ್ಯಾಜ್ಯಗಳನ್ನು ಸಂಗ್ರಹಿಸುವ ಸಂಸ್ಥೆಯು, ಅದನ್ನು ಪ್ರತ್ಯೇಕಿಸಿ, ಸಂಸ್ಕರಿಸುತ್ತದೆ.

‘ಹೆದ್ದಾರಿ ಕಾಮಗಾರಿ ನಿರ್ಮಿಸಿರುವ ಉಪಗುತ್ತಿಗೆದಾರ ಕಂಪನಿ ಇನ್ಕಾ ಕಂಪನಿ ನಮ್ಮ ಸಂಸ್ಥೆಯನ್ನು ಸಂಪರ್ಕಿಸಿ ಎಲ್‌ಡಿಪಿಇಗೆ ಬೇಡಿಕೆ ಸಲ್ಲಿಸಿತ್ತು. ಜನವರಿಯಿಂದ ಮೇ ತಿಂಗಳ ನಡುವಿನ ಅವಧಿಯಲ್ಲಿ ಸಂಗ್ರಹಿಸಿದ ಘನತ್ಯಾಜ್ಯದಲ್ಲಿ, 170 ಟನ್‌ನಷ್ಟು ಕ್ಯಾರಿಬ್ಯಾಗ್, ಪ್ಯಾಕೇಜಿಂಗ್‌ ಕವರ್‌ಗಳನ್ನು ರಸ್ತೆ ನಿರ್ಮಾಣಕ್ಕೆ ನೀಡಲಾಗಿದೆ. ಪ್ಲಾಸ್ಟಿಕ್ ಅನ್ನು ಗ್ರೇಡಿಂಗ್, ಸ್ವಚ್ಛ ಮಾಡಿ, ವ್ಯವಸ್ಥಿತಗೊಳಿಸಿ ಕೊಡುವುದು ಸವಾಲಿನ ಕೆಲಸ. ಇದಕ್ಕಾಗಿ ಪ್ರತ್ಯೇಕ ಯಂತ್ರವನ್ನು ಅಳವಡಿಸಲಾಗಿದೆ’ ಎಂದು ಮಂಗಳಾ ರಿಸೋರ್ಸಸ್‌ನ ನಿರ್ದೇಶಕ ಸಚಿನ್ ಶೆಟ್ಟಿ ಮಾಹಿತಿ ನೀಡಿದರು.

‘ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ (ಪಿಎಂಜಿಎಸ್‌ವೈ) ಅಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಐದು ಕಡೆಗಳಲ್ಲಿ ಒಟ್ಟು 10 ಕಿ.ಮೀ. ರಸ್ತೆಯನ್ನು ಎಲ್‌ಡಿಪಿಇ ಬಳಸಿ ಪ್ರಾಯೋಗಿಕವಾಗಿ ನಿರ್ಮಿಸಲಾಗಿತ್ತು. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಿಸುವ ಯಾವುದೇ ಕಂಪನಿಯಿಂದ ಬೇಡಿಕೆ ಬಂದರೂ ಎಲ್‌ಡಿಪಿಇ ಪ್ಲಾಸ್ಟಿಕ್ ಒದಗಿಸಲು ಸಂಸ್ಥೆ ಸಿದ್ಧವಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಎಲ್‌ಡಿಪಿಇ ಹಾಗೂ ಟಾರ್ ಬಳಸಿ ನಿರ್ಮಿಸಿರುವ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.