
ಪುತ್ತೂರು: ಅಕ್ರಮ- ಸಕ್ರಮ ಯೋಜನೆಯಡಿ ಮಂಜೂರಾದ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ತನ್ನ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ ಬಳಿಕ ಕರ್ತವ್ಯಕ್ಕೆ ಗೈರಾಗಿದ್ದ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸೋಮವಾರ ಮತ್ತೆ ಕರ್ತವ್ಯಕ್ಕೆ ಹಾಜರಾದರು.
ಪುತ್ತೂರು ತಾಲ್ಲೂಕು ಕಚೇರಿಯ ಭೂಮಿ ಶಾಖೆಯ ಸಿಬ್ಬಂದಿ ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಆ ಪ್ರಕರಣದಲ್ಲಿ ಎಸ್.ಬಿ.ಕೂಡಲಗಿ ವಿರುದ್ಧವೂ ಎಫ್‌ಐಆರ್ ದಾಖಲಾಗಿತ್ತು. ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕಪ್ಪನಿಗೆ ಅಕ್ರಮ– ಸಕ್ರಮ ಯೋಜನೆಯಡಿ ಮಂಜೂರಾದ ಜಮೀನನ್ನು ಪರಭಾರೆ ಮಾಡಲು ಈಶ್ವರಮಂಗಲದ ಅಜಿತ್ ನಿರಾಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.‘ವಿಲೇವಾರಿಯಾಗದ ಅರ್ಜಿ ಕುರಿತು ವಿಚಾರಿಸಿದಾಗ, ಭೂಮಿ ಶಾಖೆಯ ಸಿಬ್ಬಂದಿ ಸುನೀಲ್ ಕುಮಾರ್, ‘ಈ ಕುರಿತ ಕಡತಕ್ಕೆ ತಹಶೀಲ್ದಾರ್ ಅವರ ಸಹಿಗೆ ಬಾಕಿ ಇದೆ. ಅದಕ್ಕೆ ಹಣ ಖರ್ಚಾಗುತ್ತದೆ. ತಹಶೀಲ್ದಾರ್ ಅವರಿಗೆ ₹ 10 ಸಾವಿರ ಕೊಡಬೇಕಾಗುತ್ತದೆ ಮತ್ತು ನನಗೂ ಹಣ ಕೊಡಬೇಕು’ ಎಂದು ಬೇಡಿಕೆ ಇಟ್ಟಿದ್ದರು’ಎಂದು ಆರೋಪಿಸಿ ಅಜಿತ್ ಅವರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸುನೀಲ್ ಮತ್ತು ತಹಶೀಲ್ದಾರ್ ಎಸ್.ಬಿ.ಕೂಡಲಗಿ ವಿರುದ್ಧ ಪ್ರಕರಣ ದಾಖಲಾಗಿತ್ತು.
2025ರ ಆ.28ರಂದು ದೂರುದಾರ ಅಜಿತ್ ಅವರಿಂದ ₹ 12 ಸಾವಿರ ಲಂಚ ಪಡೆದ ಸುನೀಲ್ ಕುಮಾರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಕೂಡಾ ಆರೋಪಿ ಎಂದು ಪರಿಗಣಿಸಿದ್ದರು. ಈ ಘಟನೆ ಬಳಿಕ ಅವರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ದೀರ್ಘ ಸಮಯದಿಂದ ಗೈರಾಗಿದ್ದರಿಂದ ಅವರ ಬದಲಿಗೆ ಪುತ್ತೂರು ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ -2 ತಹಶೀಲ್ದಾರ್ ನಾಗರಾಜ್ ವಿ ಅವರನ್ನು ಪ್ರಭಾರ ತಹಶೀಲ್ದಾರ್ ಆಗಿ ಜಿಲ್ಲಾಧಿಕಾರಿ ನೇಮಕಗೊಳಿಸಿದ್ದರು.
ಎಸ್.ಬಿ. ಕೂಡಲಗಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಬಳಿಕ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚ– ಆರೋಪ ಕಚೇರಿ ಸಿಬ್ಬಂದಿ ಬಂಧನದ ಬಳಿಕ ಕರ್ತವ್ಯಕ್ಕೆ ಗೈರಾಗಿದ್ದ ಎಸ್.ಬಿ.ಕೂಡಲಗಿ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಮಂಜೂರು
ಆರೋಪದಲ್ಲಿ ಹುರುಳಿಲ್ಲ: ಎಸ್.ಬಿ.ಕೂಡಲಗಿ
‘ಅನಾವಶ್ಯಕವಾಗಿ ನನ್ನ ಮೇಲೆ ಆರೋಪ ಮಾಡಲಾಗಿದೆ. 30 ವರ್ಷಗಳ ಸೇವೆಯಲ್ಲಿ ಎಂದೂ ಈ ರೀತಿ ಮಾಡಿಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಶೀಘ್ರದಲ್ಲಿ ಸತ್ಯಾಂಶ ಬರಲಿದೆ. ನನ್ನ ಮೇಲಿನ ಆರೋಪ ಸುಳ್ಳು ಎಂದು ಸಾಬೀತು ಪಡಿಸಲು ಬೇಕಾದ ಎಲ್ಲಾ ದಾಖಲೆಗಳು ನನ್ನಲ್ಲಿವೆ’ ಎಂದು ತಹಸಿಲ್ದಾರ್ ಎಸ್.ಬಿ. ಕೂಡಲಗಿ ಹೇಳಿದ್ದಾರೆ. ‘ತಹಶೀಲ್ದಾರ್ ಹೆಸರು ದುರ್ಬಳಕೆ ಮಾಡಿಕೊಂಡು ಕಚೇರಿಯ ಕೆಲ ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ. ಈ ರೀತಿ ಹಣ ಪಡೆದುಕೊಂಡು ಭ್ರಷ್ಟಾಚಾರ ನಡೆಸಿದರೆ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ನೀಡಿದರೆ ಅದಕ್ಕೆ ನೀವೇ ಹೊಣೆಗಾರರು ಎಂದು ಎಲ್ಲ ಸಿಬ್ಬಂದಿಗೂ ಎಚ್ಚರಿಕೆ ನೀಡಿ ಸುತ್ತೋಲೆ ಹೊರಡಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.