
ಉಜಿರೆ: ‘ತಾತ ಕೀರ್ತಿಶೇಷ ಮಂಜಯ್ಯ ಹೆಗ್ಗಡೆ ಅವರ ಕನಸು ಹಾಗೂ ತಂದೆ ರತ್ನವರ್ಮ ಹೆಗ್ಗಡೆ ಅವರ ಮನಸನ್ನು ಅನುಸರಿಸಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸರ್ವತೋಮುಖ ಪ್ರಗತಿಯೊಂದಿಗೆ ಸಮಾಜಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ’ ಎಂದು ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಬಣ್ಣಿಸಿದರು.
ಶುಕ್ರವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಹೆಗ್ಗಡೆ ಅವರು ಮಹಿಳಾ ಸಬಲೀಕರಣ, ಧಾರ್ಮಿಕ ಸಂಸ್ಕಾರ, ಭಜನಾ ತರಬೇತಿ ಮೂಲಕ ಸಮಾಜದ ಸರ್ವರೂ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಎಲ್ಲರಿಗೂ ಕಾಯಕಲ್ಪ ನೀಡಿದ್ದಾರೆ. ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಕೆರೆಗಳಿಗೆ ಕಾಯಕಲ್ಪ, ಆಧುನಿಕ ತಂತ್ರಜ್ಞಾನ ಬಳಸಿ ಸರದಿಸಾಲಿನಲ್ಲಿ ದೇವರದರ್ಶನದ ಸೌಲಭ್ಯ ಇತ್ಯಾದಿ ಅನುಪಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಅಭಿನಂದಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೊಸ ಯೋಜನೆಗಳನ್ನು ಪ್ರಕಟಿಸಿದರು. ಧರ್ಮಸ್ಥಳದ ಅಶೋಕನಗರದಲ್ಲಿ ₹2 ಕೋಟಿ 41 ಲಕ್ಷ ರಾಜ್ಯಸಭಾ ಸದಸ್ಯರ ಅನುದಾನದಿಂದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ, ಬೀದಿದೀಪಗಳ ಅಳವಡಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ 300 ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಪೂರೈಸಿದ್ದು, ಮುಂದಿನ ವರ್ಷ 13 ದೇವಾಲಯಗಳನ್ನು ಜೀರ್ಣೋದ್ಧಾರಕ್ಕಾಗಿ ಗುರುತಿಸಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ₹25,500 ಕೋಟಿ ಬಿ.ಸಿ. ಟ್ರಸ್ಟ್ ಮೂಲಕ ವಿತರಿಸಲಾಗಿದೆ ಎಂದು ತಿಳಿಸಿದರು.
2026ರ ಮಾರ್ಚ್ ಒಳಗೆ 1 ಸಾವಿರ ಕೆರೆಗಳಿಗೆ ಕಾಯಕಲ್ಪ ನೀಡಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಬೆಳ್ತಂಗಡಿಯಲ್ಲಿ 7 ಎಕ್ರೆ ಜಾಗದಲ್ಲಿ ₹90 ಕೋಟಿ ವೆಚ್ಚದಲ್ಲಿ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು. ಸೇವಾಕಾಯಕದಲ್ಲಿ ಪತ್ನಿ, ಕುಟುಂಬದ ಸದಸ್ಯರ ಸಹಕಾರವನ್ನು ಸ್ಮರಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರ ಆರ್ಥಿಕ ಸ್ವಾವಲಂಬನೆಗೆ ಹೆಗ್ಗಡೆಯವರು ಸೇವಾಕಾರ್ಯಗಳ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಸತ್ಯ, ಧರ್ಮ, ನ್ಯಾಯ– ನೀತಿಯ ಸನ್ಮಾರ್ಗದಲ್ಲಿ ನಡೆದು ಆದರ್ಶ ಸಮಾಜ ಸುಧಾರಕರಾಗಿ ಎಲ್ಲರಿಗೂ ಶಾಂತಿ ಮತ್ತು ಪ್ರೀತಿಯ ಸಂದೇಶ ನೀಡುವ ಹೆಗ್ಗಡೆಯವರು ಸರ್ವರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.
ಕ್ಷೇತ್ರದ ಭಕ್ತರು ಅಭಿಮಾನಿಗಳು ಸಾರ್ವಜನಿಕರು ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿರುವುದರಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ಉತ್ಸಾಹ ಬಂದಿದೆಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ
ಕಂಚಿಕಾಮಕೋಟಿ ಸ್ವಾಮೀಜಿಯ ರಿಕ್ಷಾ ಧರ್ಮಸ್ಥಳಕ್ಕೆ
ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಆಚರಣೆ ಸಂದರ್ಭದಲ್ಲಿ ಶುಕ್ರವಾರ ಕಂಚಿ ಕಾಮಕೋಟಿ ಪೀಠದ ಸ್ವಾಮೀಜಿ ಬಳಸುತ್ತಿದ್ದ ಪವಿತ್ರ ರಿಕ್ಷಾವನ್ನು ಕ್ಷೇತ್ರಕ್ಕೆ ಕೊಡುಗೆಯಾಗಿ ಅರ್ಪಿಸಲಾಯಿತು. ಭಕ್ತರು ತಂದ ರಿಕ್ಷಾವನ್ನು ಧರ್ಮಸ್ಥಳದಲ್ಲಿ ಮಾಹಿತಿ ಕಚೇರಿ ಬಳಿಯಿಂದ ಭವ್ಯ ಮೆರವಣಿಗೆಯಲ್ಲಿ ಹೆಗ್ಗಡೆ ಅವರ ನಿವಾಸ ‘ಬೀಡು’ವಿಗೆ ತರಲಾಯಿತು.
ಕಂಚಿ ಕಾಮಕೋಟಿ ಸ್ವಾಮೀಜಿ ಪಾದಯಾತ್ರೆ ಸಂದರ್ಭದಲ್ಲಿ ಅವಶ್ಯಕ ವಸ್ತುಗಳಾದ ಪಾದುಕೆಗಳನ್ನು ಅನುಷ್ಠಾನ ಪಾತ್ರೆಗಳನ್ನು ದರ್ಭಾಸನ ಸಾಗಾಣಿಕೆಗೆ ಇದನ್ನು ಬಳಸುತ್ತಿದ್ದರು. ವೀರೇಂದ್ರ ಹೆಗ್ಗಡೆ ಅವರು ಕೊಡುಗೆಯನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಹೇಮಾವತಿ ವಿ. ಹೆಗ್ಗಡೆ ಡಿ. ಸುರೇಂದ್ರ ಕುಮಾರ್ ಡಿ. ಹರ್ಷೇಂದ್ರ ಕುಮಾರ್ ಸುಪ್ರಿಯಾ ಹರ್ಷೇಂದ್ರ ಕುಮಾರ್ ಡಿ. ಶ್ರೇಯಸ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.